ಕೃಷಿ ಮಸೂದೆಯಿಂದ ರೈತರಿಗೆ ತೊಂದರೆ ಆಗಲ್ಲ, ವಿಪಕ್ಷಗಳು ತಪ್ಪು ದಾರಿಗೆಳೆಯುತ್ತಿವೆ ; ಕಾರ್ಣಿಕ್

21-09-20 05:43 pm       Mangalore Correspondent   ಲೀಡರ್ಸ್ ರಿಪೋರ್ಟ್

ಕೇಂದ್ರ ಸರಕಾರ ಕೃಷಿಕರ ಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಕಾಯ್ದೆ ಬಗ್ಗೆ ರೈತರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಮನೆ, ಮನೆಗೆ ಭೇಟಿ ನೀಡಿ ಅರ್ಥ ಮಾಡಿಸುವ ಪ್ರಯತ್ನ ಮಾಡುವುದಾಗಿ ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಮಂಗಳೂರು, ಸೆಪ್ಟಂಬರ್ 21: ಕೇಂದ್ರ ಸರಕಾರ ಕೃಷಿಕರ ಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆಯಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ವಿಪಕ್ಷಗಳು ಕೃಷಿಕರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕಾಯ್ದೆ ಬಗ್ಗೆ ರೈತರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಮನೆ, ಮನೆಗೆ ಭೇಟಿ ನೀಡಿ ಅರ್ಥ ಮಾಡಿಸುವ ಪ್ರಯತ್ನ ಮಾಡುವುದಾಗಿ ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾರ್ಣಿಕ್, ನೂತನ ಮಸೂದೆ ಅನ್ವಯ ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶವಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಕೇಂದ್ರಗಳಲ್ಲಿಯೇ ಮಾರಾಟ ಮಾಡಬೇಕಂತಿಲ್ಲ. ರಾಜ್ಯ ಅಥವಾ ಅಂತಾರಾಜ್ಯ ವ್ಯಾಪಾರಕ್ಕೆ ಉತ್ತೇಜನ ದೊರೆಯಲಿದೆ. ಆನ್ ಲೈನ್ ಮೂಲಕ ಖಾಸಗಿ ಕಂಪನಿಗಳ ಜೊತೆಗೂ ವ್ಯಾಪಾರ ಮಾಡುವುದಕ್ಕೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಇನ್ನು ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುವುದಿಲ್ಲ ಎನ್ನುವುದು ವಿಪಕ್ಷಗಳ ಆರೋಪ ಅಷ್ಟೇ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದೆಯೂ ಮುಂದುವರಿಯಲಿದೆ. ಅಲ್ಲದೆ, ಎಪಿಎಂಸಿ ವ್ಯವಸ್ಥೆಯೂ ಇದ್ದ ಹಾಗೇ ಮುಂದುವರಿಯುತ್ತದೆ. ಆದರೆ ರೈತರ ಉತ್ಪನ್ನಗಳ ಮಾರಾಟಕ್ಕೆ ಸ್ಪರ್ಧೆಯ ಅವಕಾಶ ಸಿಗುವುದರಿಂದ ಉತ್ತಮ ದರ ಸಿಗಲಿದೆ. ಇದರಿಂದ ರೈತನ ಆದಾಯವೂ ಸಹಜವಾಗಿ ಹೆಚ್ಚಲಿದೆ. ಇದರಿಂದ ಕೃಷಿ ಬೆಳೆಗಳ ರಫ್ತಿಗೂ ಉತ್ತೇಜನ ಸಿಗಲಿದೆ ಎಂದರು ಬೆಂಗಳೂರಿನಲ್ಲಿ ಕಾಯ್ದೆ ಬಗ್ಗೆ ಗೊತ್ತಿಲ್ಲದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಹಿಂದೆ ವಿಪಕ್ಷಗಳ ಕೈವಾಡ ಇದೆ ಎಂದು ಪ್ರಶ್ನೆಯೊಂದಕ್ಕೆ ಕಾರ್ಣಿಕ್ ಉತ್ತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.

Join our WhatsApp group for latest news updates