ಅಕ್ರಮ ಗೋಸಾಗಾಟ ತಡೆಗಟ್ಟಲು ಪೊಲೀಸರಿಗೆ ಶಾಸಕ ಕಾಮತ್ ಸೂಚನೆ

07-10-20 03:07 pm       Mangalore Correspondent   ಲೀಡರ್ಸ್ ರಿಪೋರ್ಟ್

ಅಕ್ರಮ ಗೋಸಾಗಾಟವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಮಂಗಳೂರು, ಅಕ್ಟೋಬರ್ 07: ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಸಕ್ರಿಯವಾಗಿರುವ ಅಕ್ರಮ ಗೋಸಾಗಾಟವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಸಾಗಾಟದಿಂದ ಅಶಾಂತಿ ಸೃಷ್ಟಿಯಾಗುತ್ತಿದೆ. ಗೋವಿಗೆ ಹಿಂದು ಧರ್ಮದಲ್ಲಿ ಅತ್ಯಂತ ಶ್ರದ್ಧೆ ಹಾಗೂ ನಮ್ಮ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ಅನೇಕ ಕುಟುಂಬಗಳಿವೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ಗೋವುಗಳ ಕಳ್ಳತನದಿಂದ ಇಡೀ ಕುಟುಂಬವೇ ಬೀದಿ ಪಾಲಾಗುವುದನ್ನು ಕಂಡಿದ್ದೇವೆ. ಇದರಿಂದ ಕರಾವಳಿಯಲ್ಲಿ ಮತ್ತೆ ಅಶಾಂತಿ ಸೃಷ್ಟಿಯಾಗಬಾರದು. ಕರಾವಳಿಯ ಜನರ ನೆಮ್ಮದಿ ಹಾಳಾಗಬಾರದು. ಹಾಗಾಗಿ ತಕ್ಷಣವೇ ಪೊಲೀಸ್ ಇಲಾಖೆ ಗೋಕಳ್ಳರನ್ನು, ಅಕ್ರಮ ಗೋ ಸಾಗಾಟಗಾರರನ್ನು ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಮಟ್ಟ ಹಾಕಲು ತಂಡ ರಚಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ದೇವಸ್ಥಾನದ ವಠಾರದಿಂದ, ಹಟ್ಟಿಯೊಳಗೆ ನುಗ್ಗಿ ಜನರನ್ನು ಬೆದರಿಸಿ ಗೋವು ಕದಿಯುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಹಾಗಾಗಿ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೋಕಳ್ಳರನ್ನು ಮಟ್ಟ ಹಾಕಬೇಕೆಂದು ಶಾಸಕ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.