ಉತ್ತರ ವಾರ್ಡ್ ನಲ್ಲಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕಾಮತ್

11-09-20 03:21 pm       Mangalore Correspondent   ಲೀಡರ್ಸ್ ರಿಪೋರ್ಟ್

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಕಾಮಗಾರಿಗೆ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ.

ಮಂಗಳೂರು ಸಪ್ಟೆಂಬರ್ 11: ಕದ್ರಿ ಉತ್ತರ ವಾರ್ಡಿನಲ್ಲಿ 50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ‌ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕಾಮತ್ ಚಾಲನೆ ನೀಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ಇಂದು ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಈಡನ್ ಕ್ಲಬ್ - ಗುಂಡಳಿಕೆಯಿಂದ ಯೆಯ್ಯಾಡಿ ಕುಂಟಲ್ಪಾಡಿ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ರಸ್ತೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ಕುರಿತು ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದರು. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಲೋಕೋಪಯೋಗಿ ಇಲಾಖೆಯ ಮೂಲಕ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಗುದ್ದಲಿಪೂಜೆ ನೆರವೇರಿಸಿದ್ದೇವೆ ಎಂದರು.

ಈಡನ್ ಕ್ಲಬ್ ಗುಂಡಳಿಕೆಯಿಂದ ಯೆಯ್ಯಾಡಿ ಕುಂಟಲ್ಪಾಡಿ ವರೆಗೆ 403 ಮೀಟರ್ ಉದ್ದ ಹಾಗೂ 4.5 ಅಗಲದಲ್ಲಿ ಕಾಂಕ್ರೀಟಿನ ರಸ್ತೆ ನಿರ್ಮಾಣವಾಗಲಿದೆ. ಕಾಮಗಾರಿಯ ಸಂದರ್ಬದಲ್ಲಿ ಜನರಿಗೆ ಸ್ವಲ್ಪ ಮಟ್ಟಿನ ಸಮಸ್ಯೆಯಾಗಬಹುದು ಆದರೆ ಅಭಿವೃದ್ಧಿಯ ನಿಟ್ಟಿನಲ್ಲಿ ಜನರ ಸಹಕಾರ ಅತೀ ಅಗತ್ಯ ಎಂದರು.

Join our WhatsApp group for latest news updates