ಹಿರಿಯ ಸಚಿವರು ಸೇರಿ 32 ಹಾಲಿ ಶಾಸಕರಿಗೆ ಕೊಕ್ ; ದೆಹಲಿ ಬಿಜೆಪಿ ಅಂಗಳದಲ್ಲಿ ಗುಜರಾತ್ ಪ್ರಯೋಗ ಗುಮ್ಮ ! ಕರಾವಳಿಯಲ್ಲಿ 9 ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ !

08-04-23 11:14 am       Giridhar Shetty, Mangaluru   ಕರ್ನಾಟಕ

ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಈ ಬಾರಿ ಗುಜರಾತ್ ಪ್ರಯೋಗಕ್ಕೆ ಮುಂದಾಗಿರುವ ಖಚಿತ ಮಾಹಿತಿ ದೆಹಲಿ ಅಂಗಳದಿಂದ ಸಿಕ್ಕಿದೆ. ರಾಜ್ಯದಲ್ಲಿ ಹಾಲಿ ಇರುವ ವಯಸ್ಸು ಮೀರಿದ ನಾಲ್ಕೈದು ಸಚಿವರು ಸೇರಿದಂತೆ 32 ಮಂದಿ ಶಾಸಕರು ಈ ಬಾರಿ ಟಿಕೆಟ್‌ ಕಳೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಪಕ್ಷದ ಒಳಗಡೆಯಿಂದ ಲೀಕ್ ಆಗಿದೆ.

ಬೆಂಗಳೂರು, ಎ.8: ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಈ ಬಾರಿ ಗುಜರಾತ್ ಪ್ರಯೋಗಕ್ಕೆ ಮುಂದಾಗಿರುವ ಖಚಿತ ಮಾಹಿತಿ ದೆಹಲಿ ಅಂಗಳದಿಂದ ಸಿಕ್ಕಿದೆ. ರಾಜ್ಯದಲ್ಲಿ ಹಾಲಿ ಇರುವ ವಯಸ್ಸು ಮೀರಿದ ನಾಲ್ಕೈದು ಸಚಿವರು ಸೇರಿದಂತೆ 32 ಮಂದಿ ಶಾಸಕರು ಈ ಬಾರಿ ಟಿಕೆಟ್‌ ಕಳೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಪಕ್ಷದ ಒಳಗಡೆಯಿಂದ ಲೀಕ್ ಆಗಿದೆ.

ಇದರೊಂದಿಗೆ 'ಗುಜರಾತ್‌ ಮಾದರಿ’ ಪ್ರಯೋಗ ಮುಂದಿಟ್ಟು ಬಿಜೆಪಿ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿರುವಂತಿದೆ. ಎಲ್ಲ ಕ್ಷೇತ್ರಗಳಿಗೂ ತಲಾ ಮೂವರು ಸಂಭಾವ್ಯರ ಹೆಸರು ಕೊಡಿ ಎಂದು ವರಿಷ್ಠರು ಸೂಚನೆ ನೀಡಿದಾಗಲೇ ಹಲವು ಶಾಸಕರಿಗೆ ಟಿಕೆಟ್‌ ಕೈತಪ್ಪುವುದು ನಿಶ್ಚಿತ ಎನ್ನುವ ಮಾತು ಪಕ್ಷದ ಒಳಗಡೆ ಹರಿದಾಡಿತ್ತು. ಪ್ರತಿ ಕ್ಷೇತ್ರದಲ್ಲಿ ಹಾಲಿ ಶಾಸಕರ ಜೊತೆಗೆ ಇನ್ನಿಬ್ಬರು ಆಕಾಂಕ್ಷಿಗಳ ಹೆಸರು ರಾಜ್ಯಕ್ಕೆ ಹೋಗಿತ್ತು. ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಸಂಭಾವ್ಯರ ಪಟ್ಟಿಯ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಯಾವ ಶಾಸಕರನ್ನು ಬದಲಿಸುವುದು ಎನ್ನುವ ಬಗ್ಗೆ ಪಟ್ಟಿ ಅಂತಿಮಗೊಂಡಿರಲಿಲ್ಲ. ಇದೀಗ ಮೂಲಗಳ ಪ್ರಕಾರ, 32 ಬಿಜೆಪಿ ಶಾಸಕರು ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಪೈಕಿ ಹಲವು ಸಚಿವರೂ ಇದ್ದಾರೆ ಎನ್ನುವ ಮಾಹಿತಿಗಳಿವೆ. ವಯಸ್ಸಿನ ಕಾರಣದಿಂದ ಎಂಟಿಬಿ ನಾಗರಾಜ್, ಸೋಮಣ್ಣ, ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿ ಹಾಲಿ ಶಾಸಕರು, ಸಚಿವರು ಸ್ಥಾನ ಕಳಕೊಳ್ಳಲಿದ್ದಾರೆ. ಘಟಾನುಘಟಿಗಳಿಗೆ ಟಿಕೆಟ್ ನಿರಾಕರಿಸಿದಲ್ಲಿ ಬಂಡಾಯ ಎದುರಾಗುವುದನ್ನು ತಪ್ಪಿಸಲು ಕೆಲವು ಕಡೆ ಸಚಿವರ ಪುತ್ರರಿಗೆ ಟಿಕೆಟ್ ಕೊಡಲು ಬಿಜೆಪಿ ಮುಂದಾಗಿದೆ.

ಒಂದ್ಕಡೆ ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಲು ಹೊಸ ಮುಖಗಳನ್ನು ಇಳಿಸುವುದು ಮತ್ತು ಅಸಮಾಧಾನಿತ ನಾಯಕರನ್ನು ಸಂಭಾಳಿಸುವುದು ಬಿಜೆಪಿ ಹೈಕಮಾಂಡ್ ಸವಾಲು. ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಒಪ್ಪಿಗೆ ಪಡೆದೇ ಇವೆಲ್ಲವನ್ನೂ ನಿರ್ವಹಿಸಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಇಬ್ಬರು ನಾಯಕರು ಮತ್ತು ರಾಜ್ಯದ ಒಳ-ಹೊರಗನ್ನು ಬಲ್ಲ‌ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಅಧ್ಯಕ್ಷ ಜೆ.ಪಿ ನಡ್ಡಾ, ಅಮಿತ್ ಷಾ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಅಣ್ಣಾಮಲೈ ಸಂಸದೀಯ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕರಾವಳಿಯಲ್ಲಿ ಒಂಬತ್ತು ಶಾಸಕರಿಗೆ ಸರ್ಜರಿ !

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಶಾಸಕರು ಸ್ಥಾನ ಕಳಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂವರು, ಉಡುಪಿ ಜಿಲ್ಲೆಯ ನಾಲ್ವರು, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪುವುದು ನಿಶ್ಚಿತ ಎನ್ನಲಾಗಿದೆ. ಕರಾವಳಿಯಲ್ಲಿ ಕಾರ್ಯಕರ್ತರ ವಲಯದಿಂದ ವ್ಯಕ್ತವಾದ ವಿರೋಧವೇ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 2018ರ ಚುನಾವಣೆ ಸಂದರ್ಭ ಬಿಜೆಪಿ ಕರಾವಳಿಯಲ್ಲಿ ಬಹುತೇಕ ಹೊಸಬರನ್ನು ಕಣಕ್ಕಿಳಿಸಿ ಅದರಲ್ಲಿ ಯಶಸ್ವಿಯೂ ಆಗಿತ್ತು. ಹೀಗಾಗಿ ಬದಲಾವಣೆಗೆ ಸಾಕ್ಷಿಯಾಗಿದ್ದ ಕರಾವಳಿಯ ಮೂರು ಜಿಲ್ಲೆಗಳಲ್ಲೇ ಈ ಬಾರಿ 9 ಶಾಸಕರಿಗೆ ಟಿಕೆಟ್‌ ನಿರಾಕರಣೆ ಖಚಿತ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ಸಭೆ ತೀರ್ಮಾನಿಸಲಿದೆ. ಎ.8 ಮತ್ತು 9ರಂದು ದಿಲ್ಲಿಯಲ್ಲಿ ಸಭೆ ನಡೆಸಿ ಟಿಕೆಟ್‌ ಅಂತಿಮಗೊಳಿಸ ಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದರೆ, ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

Karnataka Elections 2023, 9 BJP MLA's of Dakshina Kannada, Udupi and Uttar Karnataka in fear as model on Gujrath to be followed  with major surgery. Along with strong Lingayat influence, a large SC/ST population defines the demography of four districts in central Karnataka, which has kept offering rich dividends to the BJP over the last decade and a half.