Mangalore KDP meeting: ಮಂಗಳೂರಿನಲ್ಲಿ ಉಸ್ತುವಾರಿ ಸಚಿವರ ತ್ರೈಮಾಸಿಕ ಕೆಡಿಪಿ ಸಭೆ ; ಬಿಜೆಪಿಯಿಂದ ಒಬ್ಬರೇ ಶಾಸಕರು, ಕಾಂಗ್ರೆಸಿನಿಂದ ಇಬ್ಬರು, ಇತರ ಶಾಸಕರು, ಎಂಎಲ್ಸಿಗಳೆಲ್ಲ ನಾಪತ್ತೆ ! 

05-07-24 12:42 pm       Mangalore Correspondent   ಕರಾವಳಿ

ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಿದ್ದಾರೆ.

ಮಂಗಳೂರು, ಜುಲೈ.5: ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಿದ್ದಾರೆ. ಬೆಳಗ್ಗೆ 10.30ಕ್ಕೆ ಸಭೆ ಆರಂಭಗೊಂಡಿದ್ದು ಜಿಲ್ಲೆಯ ಬಿಜೆಪಿ ಶಾಸಕರು ಮಾತ್ರ ಕಾಣೆಯಾಗಿದ್ದಾರೆ. 

ಸಚಿವ ದಿನೇಶ್ ಗುಂಡೂರಾವ್ ಮತ್ತು ಎಂಎಂಲ್ಸಿ ಐವಾನ್ ಡಿಸೋಜ 10.30ಕ್ಕೆ ಸರಿಯಾಗಿ ಬಂದಿದ್ದು ಸಭೆ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ, ಜಿಪಂ ಸಿಇಓ ಸೇರಿದಂತೆ ಜಿಲ್ಲಾ‌ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದಾರೆ. 11 ಗಂಟೆಗೆ ಪುತ್ತೂರು ಶಾಸಕ ಅಶೋಕ್ ರೈ ಆಗಮಿಸಿದ್ದಾರೆ. 11.30ರ ವೇಳೆಗೆ ಸಂಸದ ಬ್ರಿಜೇಶ್ ಚೌಟ ಆಗಮಿಸಿದ್ದಾರೆ.‌ 12.10ಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗಮಿಸಿದ್ದಾರೆ.‌ 

ಉಳಿದಂತೆ, ಮಂಗಳೂರು ನಗರ ಉತ್ತರ, ಮೂಡುಬಿದ್ರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಶಾಸಕರಿಗೆ ಜಾಗ ಬಿಡಲಾಗಿದೆ.‌ ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಧನಂಜಯ ಸರ್ಜಿ, ಮಂಜುನಾಥ ಭಂಡಾರಿ, ಪ್ರತಾಪಸಿಂಹ ನಾಯಕ್ ಅವರಿಗೂ ಜಾಗ ಬಿಡಲಾಗಿದೆ. ಮಂಗಳೂರು ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ಕೂಡ ಇಲ್ಲ. ಕಾಂಗ್ರೆಸಿನ ಇಬ್ಬರು ಶಾಸಕರು ಬಂದಿದ್ದರೆ, ಬಿಜೆಪಿಯ ಒಬ್ಬ ಶಾಸಕರು ಮಾತ್ರ ಬಂದಿದ್ದು ಸಭೆಯಲ್ಲಿ ಮೊದಲಿನ ಸಾಲು ಖಾಲಿ ಖಾಲಿ ಇದೆ. ವೇದವ್ಯಾಸ ಕಾಮತ್ ಬರುತ್ತಿದ್ದಂತೆ, ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಕಾಮತ್ ತಡವಾಗಿ ಬಂದಿದ್ದಾರೆ, ಆದರೂ ಸಭೆಗೆ ನಿಮಗೆ ಸ್ವಾಗತ ಎಂದು ಟಾಂಗ್ ಇಟ್ಟರು. 

ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇಲಾಖಾ ಮಟ್ಟದ ತ್ರೈಮಾಸಿಕ ಸಭೆ ಇದಾಗಿದ್ದು ಆಯಾಯ ಕ್ಷೇತ್ರದ ಸಮಸ್ಯೆ, ಅಹವಾಲನ್ನು ಶಾಸಕರು ಮುಂದಿಟ್ಟು ಪರಿಹಾರ ಕಂಡುಕೊಳ್ಳಲು ಅವಕಾಶ ಇರುತ್ತದೆ. ಕೆಲಸ ಮಾಡದ ಅಧಿಕಾರಿಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದು ತರಾಟೆಗೆತ್ತಿಕೊಳ್ಳುವ ಅವಕಾಶವೂ ಇದೆ. ಕಳೆದ ಬಾರಿಯ ಕೆಡಿಪಿ ಸಭೆಯಲ್ಲಿ ಹರೀಶ್ ಪೂಂಜ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಪಾಲ್ಗೊಂಡು ತುರುಸಿನ ಚರ್ಚೆಯಲ್ಲಿ ಭಾಗಿಯಾಗಿದ್ದರು. ಈ ಬಾರಿ ಮಧ್ಯಾಹ್ನ 12.20 ಕಳೆದರೂ ಸಭೆಗೆ ಬಿಜೆಪಿಯ ಒಬ್ಬರು ಶಾಸಕರು ಬಿಟ್ಟರೆ ಉಳಿದವರು ಕೆಡಿಪಿ ಸಭೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಂತೆ ಕಾಣುತ್ತಿದೆ.

ನಮ್ಮನ್ನೂ ಮೇಲೆ ಕೂರಿಸಿ ಸರ್.. 

ಕೆಡಿಪಿ ಸಭೆ ಆರಂಭಗೊಳ್ಳುವ ಸಂದರ್ಭದಲ್ಲಿ ಮೊನ್ನೆಯಷ್ಟೇ ಎಂಎಲ್ಸಿ ಆಗಿರುವ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಅವರು ತಾವು ಶಾಸಕರನ್ನೂ ವೇದಿಕೆಯಲ್ಲಿ ಕೂರಿಸಬೇಕು ಎಂದು ಉಸ್ತುವಾರಿ ಸಚಿವರಲ್ಲಿ ಕೇಳಿಕೊಂಡರು. ಅದಕ್ಕುತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಅಂತಹ ಪದ್ಧತಿ ಇಲ್ಲ ಅಲ್ವೇ ಎಂದು ಹೇಳಿದರು. ಬೆಂಗಳೂರು ಕಡೆಯಲ್ಲಿ ಶಾಸಕರು ಮೇಲೆ ಕೂರುತ್ತಾರೆ ಅಂತ ಐವಾನ್ ಮರು ಪ್ರಶ್ನೆ ಹಾಕಿದರು. ಅದಕ್ಕೆ ಉಸ್ತುವಾರಿ ಸಚಿವರು ಮೌನವಾಗಿಯೇ ನಕ್ಕರು.

Mangalore Quarterly KDP meeting of in charge ministers in Mangalore; Only one MLA from BJP, two from Congress, other MLAs and MLCs go missing