Dharmasthala News Today, Point No 13: ಕಡೆಗೂ ಪತ್ತೆಯಾಗದ ಧರ್ಮಸ್ಥಳ ಬುರುಡೆ ರಹಸ್ಯ ; ದೂರುದಾರನ ವಿರುದ್ಧವೇ ತಿರುಗಿದ ಜನಾಕ್ರೋಶ, ಭಾರೀ ನಿರೀಕ್ಷೆ ಮೂಡಿಸಿದ್ದ 13ನೇ ಪಾಯಿಂಟ್ ಖಾಲಿ ಖಾಲಿ, ಅನಾಮಿಕ ಹೇಳಿದ್ದನ್ನೇ ಕೇಳಿದ್ದ ಎಸ್ಐಟಿ ಅಧಿಕಾರಿಗಳ ಮುಂದಿನ ನಡೆಯೇನು?   

13-08-25 10:01 pm       Mangalore Correspondent   ಕರಾವಳಿ

ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎನ್ನುವ ಆರೋಪದ ಪ್ರಕರಣ ಇಡೀ ದೇಶದಲ್ಲಿ ತೀವ್ರ ಸಂಚಲನ ಎಬ್ಬಿಸಿತ್ತು. ಯಾಕಂದ್ರೆ, ಇದಕ್ಕೂ ಮೊದಲೇ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದವರು ಕೂಡ ಅಂಥದ್ದೇ ಆರೋಪಗಳನ್ನು ಮಾಡಿದ್ದರು.

ಮಂಗಳೂರು, ಆಗಸ್ಟ್ 13 : ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎನ್ನುವ ಆರೋಪದ ಪ್ರಕರಣ ಇಡೀ ದೇಶದಲ್ಲಿ ತೀವ್ರ ಸಂಚಲನ ಎಬ್ಬಿಸಿತ್ತು. ಯಾಕಂದ್ರೆ, ಇದಕ್ಕೂ ಮೊದಲೇ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದವರು ಕೂಡ ಅಂಥದ್ದೇ ಆರೋಪಗಳನ್ನು ಮಾಡಿದ್ದರು. ಆದರೆ ಪೂರಕ ದಾಖಲೆಗಳನ್ನು ಕೊಟ್ಟಿರಲಿಲ್ಲ. ಈ ನಡುವೆ, ಒಬ್ಬ ವ್ಯಕ್ತಿ ತಾನೇ ಹೂತು ಹಾಕಿದ್ದೇನೆ ಎಂದು ಹೇಳಿ ಸಾಕ್ಷಿಗಾರನಾಗಿ ಬಂದಾಗ ಸಹಜವಾಗಿಯೇ ಸುದ್ದಿಗೆ ರೆಕ್ಕ ಪುಕ್ಕ ಬಂದಿತ್ತು. ಇದಾಗಿ ಒಂದು ತಿಂಗಳಲ್ಲಿ ನಾನಾ ರೀತಿಯ ಬೆಳವಣಿಗೆ ಆಗಿದ್ದು, ಎಸ್ಐಟಿ ತಂಡ ಕಾರ್ಯಾಚರಣೆ ನಡೆಸಿದರೂ ಯಾವೊಂದೂ ಸಾಕ್ಷ್ಯವೂ ಸಿಗದೇ ಇರುವುದು ಒಟ್ಟು ಪ್ರಕರಣದಲ್ಲಿ ಜನಾಕ್ರೋಶ ದೂರುದಾರನ ವಿರುದ್ಧವೇ ತಿರುಗಿದೆ.

ದೂರುದಾರ ವ್ಯಕ್ತಿ ಜುಲೈ 3ರಂದು ವಕೀಲರ ಜೊತೆಗೆ ಬಂದು ಧರ್ಮಸ್ಥಳ ಠಾಣೆಗೆ ಮತ್ತು ದಕ್ಷಿಣ ಕನ್ನಡ ಎಸ್ಪಿಗೂ ದೂರು ನೀಡಿದ್ದರು. ಆನಂತರ, ವಕೀಲರೇ ಆತ ನೀಡಿದ್ದ ದೂರು ಪತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು. ಅದರಲ್ಲಿ ತಾನು 1995ರಿಂದ 2014ರ ವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದೆ ಎಂದೂ ಹೇಳಿಕೊಂಡಿದ್ದು ಮೇಲ್ವಿಚಾರಕರ ಸೂಚನೆಯಂತೆ ನೂರಾರು ಹೆಣಗಳನ್ನು ಹೂತಿದ್ದೇನೆ, ಸೂಕ್ತ ರಕ್ಷಣೆ ಕೊಟ್ಟರೆ ಅದನ್ನು ಅಗೆದು ತೋರಿಸಲು ಸಿದ್ಧನಿದ್ದೇನೆ ಎಂದಿದ್ದ. ಒಂದು ಕಡೆಯಂತೂ ಕಲ್ಲೇರಿ ಎಂಬಲ್ಲಿ ಶಾಲಾ ಸಮವಸ್ತ್ರದಲ್ಲಿಯೇ 14-15 ವರ್ಷದ ಬಾಲಕಿಯನ್ನು ಹೂತು ಹಾಕಿದ್ದೆ ಎಂದು ಹೇಳಿದ್ದ. ಇದಲ್ಲದೆ, ತನ್ನ ಕುಟುಂಬದ ಹೆಣ್ಮಗಳ ಮೇಲೆಯೇ ಕಿರುಕುಳ ಆದ ಸಂದರ್ಭದಲ್ಲಿ ರಾತ್ರೋರಾತ್ರಿ ಅಲ್ಲಿಂದ ಪರಾರಿಯಾಗಿ ಹೊರರಾಜ್ಯದಲ್ಲಿ ನೆಲೆಸಿದ್ದೆ ಎಂದು ಹೇಳಿದ್ದ. ಸ್ಪಷ್ಟವಾಗಿ ದೂರು ಪತ್ರ ಬರೆದಿದ್ದರಿಂದ ಸಹಜವಾಗಿಯೇ ಒಟ್ಟು ಪ್ರಕರಣದ ಬಗ್ಗೆ ಆಕ್ರೋಶದ ಅಲೆ ಎದ್ದಿತ್ತು.

ಇಷ್ಟಾದರೂ ಕನ್ನಡದ ಪ್ರಮುಖ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿಯಾಗಿರಲಿಲ್ಲ. ಮೊದಲಿಗೆ, ಟೈಮ್ಸ್ ನೌ ರಾಷ್ಟ್ರೀಯ ವಾಹಿನಿಯಲ್ಲಿ ತಲೆಬುರುಡೆಯನ್ನು ನೆಲದಿಂದ ಅಗೆದು ತೆಗೆಯುವ ವಿಡಿಯೋ ಸಹಿತ ಪ್ರಸಾರವಾಗಿತ್ತು. ದೂರುದಾರ ವ್ಯಕ್ತಿ ತಾನೇ ಧರ್ಮಸ್ಥಳ ಕಾಡಿನಿಂದ ತೆಗೆದಿರುವ ತಲೆಬುರುಡೆ ಇದೆಂದು ಧರ್ಮಸ್ಥಳ ಠಾಣೆಗೆ ಒಪ್ಪಿಸಿದ್ದ. ಬುರುಡೆಯ ವಿಡಿಯೋ ಸಹಿತ ಸುದ್ದಿ ಪ್ರಸಾರವಾಗಿದ್ದು ಒಂದೇ ದಿನದಲ್ಲಿ ಧರ್ಮಸ್ಥಳ ಫೈಲ್ಸ್ ಎನ್ನುವ ರೀತಿ ಸುದ್ದಿ ಹಬ್ಬುವಂತಾಗಿತ್ತು. ಇದೇ ವೇಳೆ, ಕೇರಳದ ಮಲಯಾಳ ಸುದ್ದಿ ವಾಹಿನಿಗಳಲ್ಲಿಯೂ ಭಾರೀ ಸುದ್ದಿಯಾಗಿ ಅಲ್ಲಿನ ಮಾಧ್ಯಮ ತಂಡಗಳು ಧರ್ಮಸ್ಥಳಕ್ಕೆ ದಾಂಗುಡಿ ಇಟ್ಟಿದ್ದವು. ಇದರಿಂದಾಗಿ ವಿಶೇಷ ತನಿಖಾ ತಂಡ ರಚನೆಯಾಗಬೇಕೆಂದು ಆಗ್ರಹವೂ ಕೇಳಿಬಂದಿತ್ತು. ಇಷ್ಟೆಲ್ಲ ಆದರೂ ಕರ್ನಾಟಕ ಸರಕಾರ ಮಾತ್ರ, ಇತರೇ ಪ್ರಕರಣಗಳ ರೀತಿ ಏನೂ ಆಗಿಯೇ ಇಲ್ಲ ಎಂಬಂತೆ ಇದ್ದುಬಿಟ್ಟಿತ್ತು. ಎಸ್ಐಟಿ ರಚನೆ ಮಾಡಬೇಕೆಂದು ಎಡಪಂಥೀಯ ಸಂಘಟನೆಗಳು, ಬೆಂಗಳೂರಿನಲ್ಲಿ ಕೆಲವು ವಕೀಲರು ಮುಖ್ಯಮಂತ್ರಿಗೆ ಅಹವಾಲು ಕೊಟ್ಟು ಆಗ್ರಹವನ್ನೂ ಮಾಡಿದ್ದರು.

ಯಾರೋ ಹೇಳ್ತಾರೆ ಅಂತ ಎಸ್ಐಟಿ ಮಾಡಕ್ಕಾಗುತ್ತಾ ಎಂದಿದ್ದ ಸಿಎಂ 

ಮಾಧ್ಯಮದವರು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಹಾಕಿದಾಗ, ಯಾರೋ ಏನೋ ಹೇಳ್ತಾರೆ ಅಂತ ಎಸ್ಐಟಿ ರಚನೆ ಮಾಡಕ್ಕಾಗುತ್ತಾ, ಏನು ಸತ್ಯಾಂಶ ಇದೆಯೆಂದು ಪೊಲೀಸರ ವರದಿ ನೋಡಿಕೊಂಡು ನಿರ್ಧರಿಸುತ್ತೀವಿ ಎಂದೇ ಹೇಳಿದ್ದರು. ಹಾಗಾಗಿ, ಸದ್ಯಕ್ಕೆ ಎಸ್ಐಟಿ ರಚನೆ ಆಗಲ್ಲ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ ಅದಾಗಿ ಎರಡು ದಿನ ಕಳೆಯುವಷ್ಟರಲ್ಲಿ ಜುಲೈ 18ರಂದು ಭಾನುವಾರ ಮಧ್ಯಾಹ್ನ ದಿಢೀರ್ ಎನ್ನುವಂತೆ ರಾಜ್ಯ ಸರಕಾರ ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ, ಎಡಿಜಿಪಿ ಪ್ರಣವ್ ಮೊಹಾಂತಿ, ಡಿಐಜಿ ಅನುಚೇತ್, ಎಎನ್ಎಫ್ ಎಸ್ಪಿ ಜಿತೇಂದ್ರ ದಯಾಮ ಅವರನ್ನು ಒಳಗೊಂಡಂತೆ ನಾಲ್ವರು ಐಪಿಎಸ್ ಅಧಿಕಾರಿಗಳಿದ್ದ ತಂಡವನ್ನು ರಚಿಸಿ ಆದೇಶಿಸಿತ್ತು. ಆನಂತರ, ಎರಡು ದಿನದಲ್ಲಿ ಮತ್ತೆ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 20 ಅಧಿಕಾರಿಗಳನ್ನು ಸೇರ್ಪಡೆಗೊಳಿಸಿ ಆದೇಶಿಸಿತ್ತು.

ಯಾವಾಗ ಎಸ್ಐಟಿ ರಚಿಸಿ ಆದೇಶ ಆಯಿತೋ ಆವಾಗಲೇ ಕನ್ನಡದ ವಾಹಿನಿಗಳಲ್ಲಿಯೂ ಸುದ್ದಿಯಾಗತೊಡಗಿತ್ತು. ಇತ್ತ ತನಿಖಾ ತಂಡವೂ ಮಂಗಳೂರಿಗೆ ಬಂದು ದೂರುದಾರ ವ್ಯಕ್ತಿಯನ್ನು ಮೊದಲು ತನಿಖೆಗೆ ಒಳಪಡಿಸಿತ್ತು. ಎರಡು ದಿನ ವಿಚಾರಣೆ ನಡೆಸಿ ಆಬಳಿಕ ಧರ್ಮಸ್ಥಳಕ್ಕೆ ಕರೆದೊಯ್ದು ಆತ ಹೇಳಿದಂತೆ, ನೇತ್ರಾವತಿ ಸ್ನಾನಘಟ್ಟದ ಬಳಿ 13 ಸ್ಥಳಗಳನ್ನು ಗುರುತು ಹಾಕಿತ್ತು. ಇಷ್ಟಾಗುತ್ತಲೇ ಧರ್ಮಸ್ಥಳ ಇಡೀ ದೇಶದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿತ್ತು. ದೂರುದಾರ ವ್ಯಕ್ತಿ ಕಲಿಯುಗದ ಭೀಮ ಎಂದು ಗುರುತಿಸಲ್ಪಟ್ಟು ಹೀರೋ ರೀತಿ ಬಿಂಬಿತವಾಗಿದ್ದ. ಆತನ ಗುರುತು ಚಹರೆಯನ್ನು ತೋರಿಸದೇ ಮುಖಕ್ಕೆ ಮಾಸ್ಕ್ ಹಾಕ್ಕೊಂಡೇ ಸಮಾಧಿ ಸ್ಥಳಕ್ಕೆ ಕರೆಸಲಾಗಿತ್ತು.

ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಪೌರ ಕಾರ್ಮಿಕರನ್ನು ಮತ್ತು ಹಿಟಾಚಿಯನ್ನು ಕರೆಸಿ ಸ್ಥಳ ಶೋಧಕ್ಕೆ ಮುಂದಾಗಿತ್ತು. ಮೊದಲಿಗೆ ಐದು ಕಡೆ ಅಗೆದು ನೋಡಿದರೂ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಆರನೇ ಗುರುತು ಹಾಕಿದ ಜಾಗದಲ್ಲಿ ಒಂದು ಅಸ್ಥಿಪಂಜರ ಸಿಕ್ಕಿತ್ತು. ಅದು ಯಾರದ್ದೆಂದು ತಿಳಿಯದಿದ್ದರೂ, ಗಂಡಸಿನದ್ದು ಎನ್ನುವ ಮೇಲ್ನೋಟದ ಮಾಹಿತಿ ಹರಿದಾಡಿತ್ತು. ಆನಂತರ, ಒಂದೊಂದೇ ಜಾಗದಲ್ಲಿ ಶೋಧ ಕಾರ್ಯಾಚರಣೆ ನಡೆದರೂ ಯಾವುದೇ ಕಡೆ ಶವದ ಸಾಕ್ಷ್ಯ ಸಿಕ್ಕಿರಲಿಲ್ಲ. 9ನೇ ಗುರುತಿನಲ್ಲಿ ಅಗೆಯುವ ಸಂದರ್ಭದಲ್ಲಿ ದಿಢೀರ್ ಎನ್ನುವಂತೆ ಬಂಗ್ಲೆಗುಡ್ಡೆಯ ಕಾಡಿನ ಮೇಲ್ಭಾಗಕ್ಕೆ ಕರೆದೊಯ್ದಿದ್ದ. ಅಲ್ಲಿ ಮೇಲ್ಭಾಗದಲ್ಲಿಯೇ ಒಂದು ಅಸ್ಥಿಪಂಜರ ಪತ್ತೆಯಾಗಿದ್ದು ಮತ್ತೆ ನಿಗೂಢತೆ ಆವರಿಸುವಂತಾಗಿತ್ತು. ಅಲ್ಲಿಯೂ ಮತ್ತೆ ಅಗೆದು ನೋಡಿದರೂ ಬೇರಾವುದೇ ಸಾಕ್ಷ್ಯ ಸಿಗಲಿಲ್ಲ.

20 ಲಕ್ಷ ಬಾಡಿಗೆ ಕೊಟ್ಟು ಜಿಪಿಆರ್ ತರಿಸಿದ್ದ ಎಸ್ಐಟಿ 

ಈ ನಡುವೆ, 13ನೇ ಪಾಯಿಂಟ್ ಬಿಟ್ಟು ಉಳಿದೆಲ್ಲ ಕಡೆ ಅಗೆದು ನೋಡಿದರೂ ಅಸ್ಥಿಪಂಜರದ ಕುರುಹು ಸಿಕ್ಕಿರಲಿಲ್ಲ. ಇದೇ ವೇಳೆ, ಶವ ಶೋಧಕ್ಕೆ ಆಧುನಿಕ ಮಾದರಿಯಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಬೇಕೆಂದು ದೂರುದಾರ ಪರ ವಕೀಲರು ಆಗ್ರಹ ಮಾಡತೊಡಗಿದ್ದರು. ಈ ಒತ್ತಾಯವನ್ನೂ ಮನ್ನಿಸಿದ ಡಿಜಿಪಿ, ಅತಿ ಬೆಲೆಯದ್ದಾದರೂ ಅದನ್ನೂ ತಂದು ಶೋಧಕ್ಕೆ ಬಳಸುವಂತೆ ಸೂಚಿಸಿದ್ದರು. ಅದರಂತೆ, ಎರಡು ದಿನಕ್ಕೆ 20 ಲಕ್ಷ ಬಾಡಿಗೆ ಎನ್ನಲಾದ ಜಿಪಿಆರ್ ಯಂತ್ರವನ್ನು ಆಗಸ್ಟ್ 11ರಂದು ತಂದಿದ್ದು 13ನೇ ಪಾಯಿಂಟ್ ನಲ್ಲೇ ಶೋಧಕ್ಕೆ ಬಳಸಲಾಯಿತು. ಈ ಪಾಯಿಂಟ್ ನಲ್ಲಿ ಅತಿ ಹೆಚ್ಚು ಹೆಣಗಳನ್ನು ಹೂತಿದ್ದೇನೆ ಎಂದಿದ್ದರೂ ಜಿಪಿಆರ್ ಯಂತ್ರದಲ್ಲಿ ಸಾಕ್ಷ್ಯ ಪತ್ತೆಯಾಗದೇ ಇರುವುದು ಎಸ್ಐಟಿ ಮತ್ತು ವಕೀಲರ ತಂಡವನ್ನೂ ನಿರಾಸೆಗೆ ದೂಡಿತ್ತು. ಆದರೆ ದೂರುದಾರ ಮಾತ್ರ ಇಲ್ಲಿಯೇ ಹಲವು ಹೆಣಗಳನ್ನು ಹೂತಿದ್ದೇನೆಂದು ಹೇಳಿದ್ದರಿಂದ ಹಿಟಾಚಿ ಬಳಸ್ಕೊಂಡು ಅಗೆಯದೇ ವಿಧಿ ಇರಲಿಲ್ಲ.

ಆಗಸ್ಟ್ 12 ಮತ್ತು 13ರಂದು ಇಡೀ ದಿನ ಕಾರ್ಮಿಕರು ಮತ್ತು ಹಿಟಾಚಿ ಬಳಸಿ ಗುಂಡಿ ತೋಡಲಾಗಿತ್ತು. ಒಂದು ಕಡೆ 18 ಅಡಿ ಆಳ, ಇನ್ನೊಂದು ಕಡೆ 15 ಅಡಿ ಆಳಕ್ಕೆ, ಸುಮಾರು 15-20 ಅಡಿ ಅಗಲದಲ್ಲಿ ಕೊರೆದರೂ ಯಾವೊಂದೂ ಸಾಕ್ಷ್ಯವೂ ಸಿಗಲಿಲ್ಲ. ನೂರಾರು ಹೆಣಗಳನ್ನು ಹೂತಿದ್ದೇನೆ ಎಂದಿದ್ದರೂ ಈಗ ಯಾವೊಂದೂ ಸಾಕ್ಷ್ಯವೂ ಸಿಗಲಿಲ್ಲ ಎನ್ನುವ ಸುದ್ದಿ ಬರುತ್ತಲೇ ಜನಾಕ್ರೋಶ ದೂರುದಾರನ ವಿರುದ್ಧ ತಿರುಗಿದೆ. ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಧರ್ಮಸ್ಥಳ ಪರವಾಗಿ ಪ್ರತಿಭಟನೆ ಶುರುವಾಗಿದೆ. ಇಷ್ಟೇ ಅಲ್ಲದೆ, ಬಿಜೆಪಿ, ಕಾಂಗ್ರೆಸ್ ನಾಯಕರೂ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿದ್ದೀರಿ ಎಂದು ಸರಕಾರವನ್ನೇ ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇಷ್ಟಾಗುತ್ತಿದ್ದಂತೆ, ಶಾಸಕಾಂಗ ಸಭೆ ನಡೆಸಿದ ಸಿದ್ದರಾಮಯ್ಯ ಧರ್ಮಸ್ಥಳ ಪ್ರಕರಣದ ಬಗ್ಗೆ ಚರ್ಚಿಸಿದ್ದು, 13ನೇ ಪಾಯಿಂಟ್ ನಲ್ಲಿ ಏನೂ ಸಿಗದಿದ್ದರೆ ಅಗೆಯುವ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದೂರುದಾರನನ್ನೇ ತನಿಖೆ ನಡೆಸುವಂತೆ ಆಗ್ರಹ ಮಾಡಿದ್ದಾರೆ.

ಇನ್ನೂ ಪತ್ತೆಯಾಗದ ಬುರುಡೆ ರಹಸ್ಯ

ದೂರು ನೀಡಿದ ಸಂದರ್ಭದಲ್ಲಿ ತಂದಿದ್ದ ತಲೆಬುರುಡೆಯ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ದೂರುದಾರನನ್ನು ಈ ಬಗ್ಗೆ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಸರಿಯಾದ ಜಾಗ ನೆನಪಿಗೆ ಬರುತ್ತಿಲ್ಲ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾನಂತೆ. ಹೀಗಾಗಿ ಭಾರೀ ಸಂಚಲನ ಮೂಡಿಸಿದ್ದ ಆ ತಲೆಬುರುಡೆಯ ರಹಸ್ಯ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ, 1986ರಲ್ಲಿ ಕೊಲೆಯಾಗಿದ್ದ ಪದ್ಮಲತಾ ಪ್ರಕರಣ ಮತ್ತು ಜಯನ್ ಎಂಬವರು 15 ವರ್ಷಗಳ ಹಿಂದೆ ಬಾಲಕಿಯನ್ನು ಪೊಲೀಸರೇ ಹೂತು ಹಾಕಿದ್ದನ್ನು ನೋಡಿದ್ದೇನೆ ಎಂದು ಪ್ರತ್ಯೇಕ ದೂರು ನೀಡಿದ್ದು ತನಿಖೆಗೆ ಆಗ್ರಹ ಮಾಡಿದ್ದಾರೆ. ಇವರೆಡೂ ಬೇರೆಯದ್ದೇ ಪ್ರಕರಣ ಆಗಿರುವುದರಿಂದ ರಾಜ್ಯ ಸರಕಾರ ಒಪ್ಪಿದರೆ ಮಾತ್ರ ಎಸ್ಐಟಿ ತಂಡ ತನಿಖೆ ಮಾಡಲು ಸಾಧ್ಯವಿದೆ. ಸದ್ಯಕ್ಕೆ ದೂರುದಾರನನ್ನು ತನಿಖೆಗೆ ಒಳಪಡಿಸಬೇಕು, ಆತನ ಹಿಂದೆ ಯಾರಿದ್ದಾರೆ, ಯಾರು ಷಡ್ಯಂತ್ರ ಮಾಡಿದ್ದಾರೆ, ಉದ್ದೇಶಪೂರ್ವಕ ಈ ರೀತಿ ಮಾಡಲಾಯಿತೇ ಎನ್ನುವ ಬಗ್ಗೆ ತನಿಖೆಯಾಗಬೇಕು ಎಂಬ ಆಗ್ರಹ ಕೇಳಿಬಂದಿದ್ದು ಎಸ್ಐಟಿ ತಂಡದ ತನಿಖಾ ಕ್ರಮವೂ ಬದಲಾಗುತ್ತಾ ಎನ್ನುವ ನಿರೀಕ್ಷೆ ಇದೆ.

The sensational allegations of mass burials in Dharmasthala’s forests, which had gripped national attention, have taken a dramatic turn — with public anger now shifting towards the complainant himself. The much-anticipated excavation at the 13th marked site, expected to reveal crucial evidence, ended in disappointment as no remains were found.