ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿಕೆ, ನಗರ ಹೊರಭಾಗಕ್ಕೂ ಬೆಳಕು ವಿಸ್ತರಣೆ, ನವರಾತ್ರಿಗೆ ಕುಡ್ಲದ ಪ್ರವಾಸೋದ್ಯಮ ಭರಪೂರ ! 

30-09-25 10:57 pm       Mangalore Correspondent   ಕರಾವಳಿ

ಮಂಗಳೂರು ದಸರಾದಲ್ಲಿ ನಗರದ ತುಂಬ ಬೆಳಕಿನ ಶೃಂಗಾರವೇ ಗಮನ ಸೆಳೆಯುತ್ತಿದೆ. ಇಷ್ಟೆಲ್ಲ ಬಣ್ಣದ ಚಿತ್ತಾರದಲ್ಲಿ ಬೀದಿಗಳನ್ನು ಬೆಳಗಿಸಲು ಮೂರು ಕೋಟಿ ಮಿನಿಯೇಚರ್ ಗಳನ್ನು ಬಳಸಲಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ವ್ಯಾಪ್ತಿ ಮತ್ತು ಹೆಚ್ಚು ದೇವಸ್ಥಾನಗಳಿಗೆ ಬಣ್ಣದ ಬೆಳಕನ್ನು ಹರಿಸಲಾಗಿದೆ. 

ಮಂಗಳೂರು, ಸೆ.30 : ಮಂಗಳೂರು ದಸರಾದಲ್ಲಿ ನಗರದ ತುಂಬ ಬೆಳಕಿನ ಶೃಂಗಾರವೇ ಗಮನ ಸೆಳೆಯುತ್ತಿದೆ. ಇಷ್ಟೆಲ್ಲ ಬಣ್ಣದ ಚಿತ್ತಾರದಲ್ಲಿ ಬೀದಿಗಳನ್ನು ಬೆಳಗಿಸಲು ಮೂರು ಕೋಟಿ ಮಿನಿಯೇಚರ್ ಗಳನ್ನು ಬಳಸಲಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ವ್ಯಾಪ್ತಿ ಮತ್ತು ಹೆಚ್ಚು ದೇವಸ್ಥಾನಗಳಿಗೆ ಬಣ್ಣದ ಬೆಳಕನ್ನು ಹರಿಸಲಾಗಿದೆ. 

ಕುದ್ರೋಳಿ ದಸರಾ ಅಂಗವಾಗಿ ಸಂಜೆ ಹೊತ್ತು ಮಂಗಳೂರು ನಗರಕ್ಕೆ ಮತ್ತು ನಗರದೊಳಗಿನ ದೇವಸ್ಥಾನಗಳು ಪೂರ್ತಿಯಾಗಿ ಬಣ್ಣದ ಬಣ್ಣದ ಬೆಳಕಿನಿಂದ ಶೋಭಿಸುತ್ತಿವೆ. ಇದನ್ನು ನೋಡಲು ಸಾವಿರಾರು ಮಂದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಇದೇ ಕಾರಣದಿಂದ ಸಂಜೆ ವೇಳೆ ನಗರದಲ್ಲಿ ಪೂರ್ತಿಯಾಗಿ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ. 

ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಈ ಬೆಳಕಿನ ಶೃಂಗಾರ ಮಾಡಲಾಗುತ್ತಿದ್ದು ನಗರ ವ್ಯಾಪ್ತಿಯ ಬಹುತೇಕ ಭಾಗವನ್ನು ಝಗಮಗಿಸುವ ದೀಪಗಳು ಆವರಿಸಿವೆ. ಆದರೆ ಈ ಬಾರಿ ಇದರ ವ್ಯಾಪ್ತಿ ಬಹಳಷ್ಟು ಹೆಚ್ಚಾಗಿದೆ. ನಗರದ ಹೊರಭಾಗ ಪಡೀಲ್, ಕಾವೂರು ಸೇರಿದಂತೆ ಎಲ್ಲ ಕಡೆಯಲ್ಲೂ ಬೆಳಕಿನ ವ್ಯವಸ್ಥೆ ನಡೆದಿದೆ. ಇದಕ್ಕಾಗಿ ಮೂರು ಕೋಟಿಗೂ ಮಿಕ್ಕಿದ ಮಿನಿಯೇಚರ್ ಗಳನ್ನು ಬಳಸಿಕೊಳ್ಳಲಾಗಿದೆ. 9 ವೋಲ್ಟ್ 60 ಲಕ್ಷ ಬಲ್ಬ್ ಗಳನ್ನು ಬಳಸಲಾಗಿದೆ. ನಗರದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಸ್ವಾಗತ ದ್ವಾರ ಮಾಡಿದ್ದು ಇದಕ್ಕೂ ಸಾಕಷ್ಟು ಬಲ್ಬ್ ಗಳನ್ನು ಬಳಸಿಕೊಳ್ಳಲಾಗಿದೆ. 11 ದಿನಗಳ ಈ ನಗರವನ್ನು ಝಗಮಗಿಸಲು 30 ಲಕ್ಷ ಲೀಟರ್ ಡೀಸೆಲ್ ಬೇಕಾಗಬಹುದು ಎಂಬ ಅಂದಾಜಿದೆ. 25 ಲಕ್ಷ ರೂ. ಬರೀ ಶೃಂಗಾರದ ಬೆಳಕಿನ ಆಧಾರಕ್ಕೆ ಹಾಕಿರುವ ಕಂಬಗಳನ್ನು ಹಾಕಲು ಖರ್ಚಾಗಿದೆಯಂತೆ.  

ಕಳೆದ ಕೆಲವು ವರ್ಷಗಳಿಂದ ಕುಡ್ಲ ದಸರಾದಲ್ಲಿ ನಗರ ಭಾಗದ ಶೃಂಗಾರಕ್ಕೆ ಬಳಸುತ್ತಿದ್ದುದಕ್ಕಿಂತ ಹೆಚ್ಚು ವ್ಯಯ ಈ ಬಾರಿ ಆಗುತ್ತಿದೆ. ಹಿಂದಿಗಿಂತ ಹೆಚ್ಚಿನ ಪ್ರದೇಶದಲ್ಲಿ ಈ ಬಾರಿ ಲೈಟಿಂಗ್ ಮಾಡಲಾಗಿದೆ. ಕಳೆದ ಬಾರಿ ಪಟ್ಟಿಯಲ್ಲಿ ಇಲ್ಲದ ಬೀದಿಗಳು ಸೇರಿದಂತೆ ಹೊಸ ದೇವಸ್ಥಾನಗಳು ಈ ಬಾರಿ ಪಟ್ಟಿ ಸೇರಿಕೊಂಡಿದೆ. ಸಂಜೆ 6ರಿಂದ ರಾತ್ರಿ 12ರ ವರೆಗೆ ಬೆಳಕಿನ ಶೃಂಗಾರ ಉರಿಯುತ್ತಿದ್ದು, ಮಂಗಳಾದೇವಿ, ಕುದ್ರೋಳಿ ದೇವಸ್ಥಾನ ಹಾಗೂ ಬೀದಿ ಬದಿಯ ಶೃಂಗಾರ ಎನ್ನುವ ಆಧಾರದಲ್ಲಿ ಮೂರು ಪ್ಯಾಕೇಜ್ ಗಳಲ್ಲಿ ಗುತ್ತಿಗೆದಾರರು ಟೆಂಡರ್ ವಹಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳು, ಬ್ಯಾಂಕ್ ಕಚೇರಿಗಳು, ಹೊಟೇಲುಗಳು ಕೂಡ ಶೃಂಗಾರಗೊಂಡಿದ್ದು ಇಡೀ ಮಂಗಳೂರು ಮಧುವಣಗಿತ್ತಿಯಂತೆ ಶೋಭಿಸುತ್ತಿದೆ. 

ಇದರ ನಡುವೆ, ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಬೀದಿಯಲ್ಲಿ ಹಾಕಿರುವ ಬಲ್ಬ್  ಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಉರಿಯುತ್ತಿದ್ದಾಗ ನೀರು ಬಿದ್ದರೆ ಹಾಳಾಗುತ್ತಿದ್ದು ಇದರಿಂದ ಗುತ್ತಿಗೆದಾರರಿಗೆ ಭಾರೀ ಪ್ರಮಾಣದ ನಷ್ಟವೂ ಉಂಟಾಗಿರುವ ಮಾತು ಕೇಳಿಬಂದಿದೆ. ಸುಮಾರು ಶೇ.45ರಷ್ಟು ಮಂಗಳೂರಿನ ಗುತ್ತಿಗೆದಾರರು ಈ ಬಲ್ಬ್ ಗಳನ್ನು ಹಾಕಿದ್ದರೆ, ಉಳಿದ ಶೇ.55ರಷ್ಟು ಹೊರ ಭಾಗದ ಗುತ್ತಿಗೆದಾರರು ಶೃಂಗಾರ ಬಲ್ಬ್ ಗಳನ್ನು ಅಳವಡಿಸಿದ್ದಾರೆ. ‌ಬರೀ ಲೈಟಿಂಗ್ ವ್ಯವಸ್ಥೆಯೇ ಕೋಟ್ಯಂತರ ವೆಚ್ಚದ್ದಾಗಿದ್ದು ಎಲ್ಲವನ್ನೂ ಪಾಲಿಕೆಯೇ ಭರಿಸುತ್ತಾ, ಖಾಸಗಿಯವರೂ ಪಾಲು ಪಡೆಯುತ್ತಾರಾ ಎನ್ನುವುದು ಅಂತಿಮ ಆಗಿಲ್ಲ.‌ ಬಹುತೇಕ ಶೃಂಗಾರಗೊಂಡಿದ್ದರಿಂದ ಇದನ್ನು ನೋಡುವುದಕ್ಕಾಗಿಯೇ ಹೊರಗಿನಿಂದ ಜನರು ಬರುತ್ತಿದ್ದು ಪ್ರವಾಸೋದ್ಯಮ ಭರಪೂರ ಎನಿಸಿದೆ.

Mangaluru is dazzling this Navaratri as nearly three crore miniature bulbs have been installed across the city, extending even to its outskirts. Iconic temples like Kudroli and Mangaladevi, major streets, government buildings, banks, and hotels are adorned with colorful lighting, attracting thousands of visitors daily.