ರಾಜ್ಯದ ಮೀನುಗಾರರಿಗೆ ಕೇರಳ, ಗೋವಾದಲ್ಲಿ ಪೊಲೀಸರಿಂದಲೇ ಕಿರುಕುಳ ; ಗಡಿ ರೇಖೆ ಉಲ್ಲಂಘನೆ ಹೆಸರಲ್ಲಿ ಭಾರೀ ದಂಡ, ಮೀನುಗಳ ಸುಲಿಗೆ ! ಮೀನುಗಾರಿಕಾ ಸಚಿವರ ನಿರ್ಲಕ್ಷ್ಯಕ್ಕೆ ಆಕ್ರೋಶ

16-11-26 01:56 pm       HK News Staffer   ಕರಾವಳಿ

ರಾಜ್ಯದ ಕರಾವಳಿಯಿಂದ ಮೀನುಗಾರಿಕೆ ತೆರಳಿದ ಬೋಟುಗಳನ್ನು ಹಿಡಿದಿಟ್ಟು ಗೋವಾ ಪೊಲೀಸರು ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಉಡುಪಿ, ಮಂಗಳೂರಿನಿಂದ ತೆರಳಿದ್ದ ಮೀನುಗಾರಿಕಾ ಬೋಟ್‌ಗಳಿಗೆ ಗೋವಾ ಕಡಲ ತೀರದಲ್ಲಿ ಅಲ್ಲಿನ ಕರಾವಳಿ ತಟರಕ್ಷಕ ಪೊಲೀಸರು ವಿನಾಕಾರಣ ಭಾರೀ ದಂಡ ವಿಧಿಸಿದ್ದಾರೆ.

ಮಂಗಳೂರು, ನ.16: ರಾಜ್ಯದ ಕರಾವಳಿಯಿಂದ ಮೀನುಗಾರಿಕೆ ತೆರಳಿದ ಬೋಟುಗಳನ್ನು ಹಿಡಿದಿಟ್ಟು ಗೋವಾ ಪೊಲೀಸರು ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಉಡುಪಿ, ಮಂಗಳೂರಿನಿಂದ ತೆರಳಿದ್ದ ಮೀನುಗಾರಿಕಾ ಬೋಟ್‌ಗಳಿಗೆ ಗೋವಾ ಕಡಲ ತೀರದಲ್ಲಿ ಅಲ್ಲಿನ ಕರಾವಳಿ ತಟರಕ್ಷಕ ಪೊಲೀಸರು ವಿನಾಕಾರಣ ಭಾರೀ ದಂಡ ವಿಧಿಸಿದ್ದಾರೆ. 

ಸಮುದ್ರ ಮೀನುಗಾರಿಕೆ

ನಿಯಮದಂತೆ 12 ನಾಟಿಕಲ್ ಮೈಲು ವ್ಯಾಪ್ತಿಯಿಂದ ಹೊರಗೆ  ಮೀನುಗಾರಿಕೆ ನಡೆಸುತ್ತಿದ್ದರೂ ಗೋವಾ ಸಿ ಎಸ್ ಪಿ  ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಮಂಗಳೂರಿನ ಮೀನುಗಾರರು ಅಳಲು ತೋಡಿಕೊಂಡಿದ್ದಾರೆ. ಕರ್ನಾಟಕದ ಗಡಿ ದಾಟುತ್ತಿದ್ದಂತೆ ಗೋವಾ ಪೊಲೀಸರು ಭಾರೀ ದಂಡ ವಿಧಿಸುತ್ತಿದ್ದಾರೆ. ಕರ್ನಾಟಕದ ಮೀನುಗಾರಿಕಾ ಬೋಟ್ ಗಳಿಗೆ ದಂಡ ವಿಧಿಸುವುದಲ್ಲದೆ, ಮೀನುಗಳನ್ನು ಸುಲಿಗೆ ನಡೆಸುತ್ತಿದ್ದಾರೆ. 

ಲಕ್ಷಾಂತರ ರೂಪಾಯಿ ದಂಡದ ಜೊತೆಗೆ ಹಿಡಿದ ಮೀನನ್ನೂ ವಶಕ್ಕೆ ಪಡೆಯುತ್ತಿದ್ದು ಮಂಗಳೂರು, ಉಡುಪಿ ಭಾಗದಿಂದ ತೆರಳಿದ್ದ ಮೀನುಗಾರರು ಆತಂಕದಲ್ಲಿದ್ದಾರೆ. ಗೋವಾ ಪೊಲೀಸರಿಗೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದೆ. ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಮಂಗಳೂರಿನ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯ ಸರ್ಕಾರ ನಮ್ಮ ಮೀನುಗಾರರ ಬಗ್ಗೆ ನಿರ್ಲಕ್ಷ ತೋರುತ್ತಿದೆ, ರಾಜ್ಯದ ಮೀನುಗಾರಿಕಾ ಸಚಿವರೂ ಮೌನ ವಹಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಮೀನುಗಾರಿಕಾ ಇಲಾಖೆಗೆ ದೂರು ನೀಡಿದರೂ, ನಿರ್ಲಕ್ಷ್ಯ ತೋರಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪರ್ಸಿನ್ ಬೋಟ್ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಕೇರಳದಲ್ಲಿಯೂ ಇದೇ ರೀತಿ ರಾಜ್ಯದ ಮೀನುಗಾರರಿಗೆ ಕಿರುಕುಳ ನೀಡಲಾಗುತ್ತಿದ್ದು ಆಳ ಸಮುದ್ರದಲ್ಲಿ ಆ ಕಡೆ ಹೋದ ಕಾರಣಕ್ಕೆ ಭಾರೀ ದಂಡ ವಿಧಿಸುತ್ತಿದ್ದಾರೆ. 

ಭಾರತೀಯ ಜಲರೇಖೆ 150 ಕಿಮೀ ಇದ್ದರೂ, ರಾಜ್ಯವಾರು ವಿಂಗಡಣೆ ಹೆಸರಲ್ಲಿ ಮೀನುಗಾರರಿಗೆ ದಂಡ ಹಾಕುವುದು ಅಕ್ಷಮ್ಯ. ಕೇರಳ ಮತ್ತು ಗೋವಾ ಮೀನುಗಾರರು ಈ ಕಡೆ ಬಂದರೆ ಆ ರೀತಿಯ ದಂಡ ವಿಧಿಸುವ ಪದ್ಧತಿ ಇಲ್ಲ ಎಂದು ಮೀನುಗಾರ ಮುಖಂಡ ರಾಜು ಮೊಗವೀರ ಹೇಳುತ್ತಾರೆ. ಇದೇ ರೀತಿಯಾದರೆ ಮುಂದೆ, ಮೀನುಗಾರರ ನಡುವೆಯೇ  ಸಂಘರ್ಷ ಎದುರಾಗುವ ಸಾಧ್ಯತೆ ಇದೆ ಎಂದಿದ್ದಾರೆ.