ದಂಪತಿಯ ಹುಚ್ಚು ; ಬುರ್ಜ್ ಖಲೀಫಾ ಕಟ್ಟಡ ನುಡಿಯ್ತಂತೆ ಮಗುವಿನ ಭವಿಷ್ಯ !

12-09-20 02:57 pm       Headline Karnataka News Network   ಸ್ಪೆಷಲ್ ಕೆಫೆ

ತಮಗೆ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂಬ ಕುತೂಹಲ ತಣಿಸಿಕೊಳ್ಳಲು ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬೆಳಕಿನ ತರಂಗಗಳ ಏರಿಳಿತವನ್ನು ಅನುಸರಿಸಿ ಹುಟ್ಟುವ ಮಗುವಿನ ಭವಿಷ್ಯ ನೋಡಿದ್ದಾರೆ.

ದುಬೈ, ಸೆಪ್ಟೆಂಬರ್ 12: ಕೆಲವರಿಗೆ ಏನೆಲ್ಲಾ ಹುಚ್ಚು ಇರುತ್ತೆ ಅಂದ್ರೆ ಅದನ್ನು ನಂಬೋಕು ಆಗಲ್ಲ. ದುಬೈನ  ಸಿರಿವಂತ ದಂಪತಿ ತಮ್ಮ ವಿಚಿತ್ರ ಹುಚ್ಚಿನಿಂದ ಈಗ ಸುದ್ದಿಯಾಗಿದ್ದಾರೆ. ತಮಗೆ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂಬ ಕುತೂಹಲ ತಣಿಸಿಕೊಳ್ಳಲು ಅವರು ಆಯ್ದುಕೊಂಡಿದ್ದು ಬುರ್ಜ್ ಖಲೀಫಾ ಕಟ್ಟಡವನ್ನು. 

ಜಗತ್ತಿನಲ್ಲಿ ಯಾರೂ ಮಾಡದ ಸಾಹಸವನ್ನು ಈ ದಂಪತಿ ಮಾಡಿದ್ದು ಜನರ ಗಮನ ಸೆಳೆಯುವಂತಾಗಿದೆ. ಒಂದು ಹೆಣ್ಣು ಮಗುವನ್ನು ಹೊಂದಿರುವ ಅನಾಸ್ ಮತ್ತು ಅಸಲಾ ಮರ್ವಾ ದಂಪತಿ, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿಗೆ ತಮ್ಮ ಎರಡನೆಯ ಮಗುವಿನ ಲಿಂಗ ತಿಳಿದುಕೊಳ್ಳಲು ಜಗತ್ತಿನಲ್ಲಿ ಯಾರೂ ಮಾಡದಂಥ ಸಾಹಸ ಮಾಡಬೇಕೆಂಬ ಆಸೆ ಇತ್ತು.ಅದೇ ಕಾರಣಕ್ಕೆ ಅದ್ದೂರಿ ಸಮಾರಂಭವನ್ನು ಇವರು ಆಯೋಜಿಸಿದ್ದರು. 163 ಅಂತಸ್ತಿನ 828 ಮೀಟರ್ ಎತ್ತರವುಳ್ಳ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬೆಳಕಿನ ತರಂಗಗಳ ಏರಿಳಿತವನ್ನು ಅನುಸರಿಸಿ ಹುಟ್ಟುವ ಮಗುವಿನ ಭವಿಷ್ಯ ನೋಡಿದ್ದಾರೆ.

ನೀಲಿ ಮತ್ತು ಗುಲಾಬಿ ಬಣ್ಣಗಳ ಬೆಳಕನ್ನು ಒಂದನೇ ಮಹಡಿಯಿಂದ 163ನೇ ಮಹಡಿಯ ವರೆಗೆ ಹರಿಸುತ್ತಾ ಹೋಗುತ್ತಾರೆ. ಕೊನೆಯಲ್ಲಿ 10ರಿಂದ 1ರ ವರೆಗೆ ಕೌಂಟ್​ ಡೌನ್​ ಶುರುವಾಗುತ್ತದೆ. ಕೊನೆಗೆ, ಆ ಬೆಳಕಿನ ನಡುವೆ ಇಟ್ಸ್​ ಬಾಯ್​ ಎಂದು ತೋರಿಸುತ್ತಿದ್ದಂತೆಯೇ ದಂಪತಿ ಸೇರಿ ಎಲ್ಲರೂ ಸಂತಸಗೊಳ್ಳುತ್ತಾರೆ.. 

ಈ ವಿದ್ಯಮಾನದ ವಿಡಿಯೋ ವೈರಲ್​ ಆಗಿದ್ದು, ಯೂಟ್ಯೂಬ್ ನಲ್ಲಿ 2 ದಶಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಆದರೆ ಹುಟ್ಟುವ ಮಗು ಗಂಡೇ ಎಂದು ಬುರ್ಜ್ ಖಲೀಫಾ ಹೇಗೆ ಹೇಳಿದ್ದು ಎನ್ನುವ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಒಟ್ಟಿನಲ್ಲಿ ದಂಪತಿಯ ವಿಚಿತ್ರ ಹುಚ್ಚಿನಿಂದಾಗಿ ಒಮ್ಮೆಗೆ ಸುದ್ದಿಯಾಗಿದ್ದಂತೂ ಸತ್ಯ.

Join our WhatsApp group for latest news updates

Video: