ಇಂಗ್ಲೆಂಡ್‌ ವನಿತೆಯರ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ ದಾಖಲೆಯ ಶತಕ!

22-09-22 02:56 pm       Source: Vijayakarnataka   ಕ್ರೀಡೆ

ಇಂಗ್ಲೆಂಡ್‌ ವಿರುದ್ದ ಎರಡನೇ ಮಹಿಳೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟ್‌ ಬೀಸಿದ ಭಾರತ ಮಹಿಳಾ ತಂಡದ...

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಎರಡನೇ ಮಹಿಳೆಯರ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ದಾಖಲೆಯ ಶತಕ ಸಿಡಿಸಿದರು. ಆ ಮೂಲಕ ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 333 ರನ್‌ ಗಳಿಸಲು ನೆರವಾದರು.

ಕ್ಯಾಂಟಬರಿಯ ಸೇಂಟ್ ಲಾರೆನ್ಸ್ ಮೈದಾನದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಇಂಗ್ಲೆಂಡ್‌ ಬೌಲರ್‌ಗಳಿಗೆ ಬೆವರಿಳಿಸಿದರು.

Harmanpreet Kaur hits classy hundred, registers India's highest individual  score against England in Women's ODIs - Sports News

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹರ್ಮನ್‌ಪ್ರೀತ್‌ ಕೌರ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಎದುರಿಸಿದ 111 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ ಹಾಗೂ 18 ಬೌಂಡರಿಗಳೊಂದಿಗೆ ಅಜೇಯ 143 ರನ್‌ ಚಚ್ಚಿದರು. ಆ ಮೂಲಕ ವೃತ್ತಿ ಜೀವನದ ಐದನೇ ಶತಕ ಹಾಗೂ ಇಂಗ್ಲೆಂಡ್‌ ವಿರುದ್ಧ ಮಹಿಳೆಯರ ಒಡಿಐ ಕ್ರಿಕೆಟ್‌ನಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಳ್ಳುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.

2013ರಲ್ಲಿ ಬ್ರೆಬೋರ್ನ್‌ನಲ್ಲಿ ನಡೆದಿದ್ದ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 109 ಎಸೆತಗಳಲ್ಲಿ 107 ರನ್‌ ಗಳಿಸಿದ್ದರು. ಇದೀಗ 143 ರನ್‌ ಗಳಿಸುವ ಮೂಲಕ ತಮ್ಮದೇ ಆದ 9 ವರ್ಷಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸ್ಮೃತಿ ಮಂಧಾನ ಅವರ ಜೊತೆ 33 ರನ್‌ ಜೊತೆಯಾಟವಾಡಿದ್ದ ಹರ್ಮನ್‌ಪ್ರೀತ್‌ ಕೌರ್‌ ಅವರು, ಹರ್ಲೀನ್‌ ಡಿಯೋಲ್‌(58) ಅವರ ಜೊತೆ ನಾಲ್ಕನೇ ವಿಕೆಟ್‌ಗೆ 113 ರನ್‌ ಗಳಿಸಿದ್ದರು. ಆ ಮೂಲಕ ಭಾರತ ತಂಡ 200 ರನ್‌ ಗಡಿ ದಾಟಲು ನೆರವಾಗಿದ್ದರು. ಅಂತಿಮ ಹಂತದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ ನಾಯಕಿ, ಭಾರತ ತಂಡದ ಮೊತ್ತವನ್ನು 300ರ ಗಡಿ ದಾಟಲು ಸಹಾಯವಾಗಿದ್ದರು.

ಡೆತ್‌ ಓವರ್‌ಗಳಲ್ಲಿ ಹರ್ಮನ್‌ಪ್ರೀತ್‌ ಭರ್ಜರಿ ಬ್ಯಾಟ್‌ ಬೀಸಿದ್ದರು. ಅದರಂತೆ ಕೊನೆಯ ಮೂರು ಓವರ್‌ಗಳಲ್ಲಿ ಭಾರತ ತಂಡ 62 ರನ್‌ ಗಳಿಸಿತ್ತು. ಇಂಗ್ಲೆಂಡ್‌ನ ಎಡಗೈ ವೇಗಿ ಫ್ರೆಯಾ ಕೆಂಪ್‌ ಅವರು ತನ್ನ ಆರಂಭಿಕ 8 ಓವರ್‌ಗಳಿಗೆ 44 ರನ್‌ ನೀಡಿದ್ದರು. ಆದರೆ, ತಮ್ಮ ಕೊನೆಯ ಎರಡು ಓವರ್‌ಗಳಿಗೆ 45 ರನ್‌ ಬಿಟ್ಟು ಕೊಟ್ಟಿದ್ದರು.

ಅಂತಿಮವಾಗಿ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 333 ರನ್‌ ಗಳಿಸಿತು ಹಾಗೂ ಇಂಗ್ಲೆಂಡ್‌ ತಂಡಕ್ಕೆ 334 ರನ್‌ ಬೃಹತ್‌ ಮೊತ್ತದ ಗುರಿ ನೀಡಿತು.

ಸಂಕ್ಷಿಪ್ತ ಸ್ಕೋರ್‌(ಇನಿಂಗ್ಸ್‌ ಬ್ರೇಕ್)

ಭಾರತ(ಮ): 50 ಓವರ್‌ಗಳಿಗೆ 333-5 (ಹರ್ಮನ್‌ಪ್ರೀತ್‌ ಕವರ್‌ 143*, ಸ್ಮೃತಿ ಮಂಧಾನಾ 40, ಹರ್ಲಿನ್‌ ಡಿಯೋಲ್ 58; ಚಾರ್ಲೋಟ್‌ ಡೀನ್‌ 39ಕ್ಕೆ 1)

Ind Vs Eng Harmanpreet Kaur Hits Classy Hundred, Registers India’s Highest Individual Score Against England In Womens Odis.