ಟೋಕಿಯೋ ಒಲಿಂಪಿಕ್ಸ್: ಐತಿಹಾಸಿಕ ಪದಕ ಕೈಚೆಲ್ಲಿದ ಕನ್ನಡತಿ ಅದಿತಿ ಅಶೋಕ್

07-08-21 02:20 pm       Mykhel: Sadashiva   ಕ್ರೀಡೆ

ಭಾರತದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದಾಸೆ ಕೈ ಚೆಲ್ಲಿದ್ದಾರೆ.

ಟೋಕಿಯೋ: ಭಾರತದ ಗಾಲ್ಫರ್, ಕನ್ನಡತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದಾಸೆ ಕೈ ಚೆಲ್ಲಿದ್ದಾರೆ. ಶನಿವಾರ (ಆಗಸ್ಟ್ 7) ನಡೆದ ಪಂದ್ಯದಲ್ಲಿ ಅದಿತಿ ಪದಕದ ಅತೀ ಸಮೀದಲ್ಲಿ ಎಡವಿದ್ದಾರೆ. ಕೊನೇ ಸುತ್ತಿನ ಕೊನೇ ಕ್ಷಣದ ವರೆಗೂ ಟಾಪ್ 3ರಲ್ಲಿದ್ದ ಅದಿತಿ ಅಂತಿಮವಾಗಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದಾರೆ. ಶನಿವಾರ ನಡೆದ ನಾಲ್ಕನೇ ಮತ್ತು ಅಂತಿಮ ಸುತ್ತಿನ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಅದಿತಿ ಮೂರು ಯತ್ನಗಳಲ್ಲಿ 68ರ ಕೆಳಗೆ ಅಂಕಗಳಿಸಿ ಸ್ಪರ್ಧೆ ಮುಗಿಸಿದ್ದಾರೆ.

ಅಸಲಿಗೆ ಅದಿತಿ ಅಂಕಗಳ ಆಧಾರದಲ್ಲಿ ಮೂರನೇ ಸ್ಥಾನದಲ್ಲಿ ಇದ್ದರಾದರೂ ದ್ವಿತೀಯ ಸ್ಥಾನದಲ್ಲಿದ್ದ ಜಪಾನ್‌ನ ಮೋನ್ ಮತ್ತು ನ್ಯೂಜಿಲೆಂಡ್‌ನ ಲಿಡಿಯಾ ಕೊ 268 ಸಮಾನ ಅಂಕ ಗಳಿಸಿದ್ದರಿಂದ ತೃತೀಯ ಸ್ಥಾನ ಲಿಡಿಯಾ ಅವರದ್ದಾಗಿತು. ದ್ವಿತೀಯ ಸ್ಥಾನದಲ್ಲಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಮೂಲತಃ ಬೆಂಗಳೂರಿನವರಾದ 23ರ ಹರೆಯದ ಅದಿತಿ ಟೋಟಲ್‌ನಲ್ಲಿ 269 ಅಂಕ ಗಳಿಸಿದ್ದರು.



ಆರಂಭದಿಂದಲೂ ದ್ವಿತೀಯ ಸ್ಥಾನದಲ್ಲಿದ್ದ ಅದಿತಿ

ಸ್ಪರ್ಧೆ ಆರಂಭವಾಗುವಾಗಲೇ ಅದಿತಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಅದಿತಿ ಆಡುತ್ತಿದ್ದ ರೀತಿ ಅವರಿಗೆ ಪದಕ ಸಿಕ್ಕೇ ಸಿಗುತ್ತದೆ ಎನ್ನವಂತಿತ್ತು. ಆದರೆ ಕೊನೇ ಸುತ್ತಿನ ಕೊನೇ ಹಂತದವರೆಗೂ ತೃತೀಯ ಸ್ಥಾನದಲ್ಲಿದ್ದ ಅದಿತಿ ಸ್ಪರ್ಧೆ ಮುಗಿಯುವಾಗ ನಾಲ್ಕನೇ ಸ್ಥಾನಕ್ಕೆ ಕುಸಿದು ಆಘಾತ ಅನುಭವಿಸಿದರು. ಆದರೆ ಒಲಿಂಪಿಕ್ಸ್‌ನಲ್ಲಿ ಅದಿತಿಯ ಈ ನಾಲ್ಕನೇ ಸ್ಥಾನದ ಸಾಧನೆ ವಿಶೇವೆನಿಸಿದೆ. ಯಾಕೆಂದರೆ ಒಲಿಂಪಿಕ್ಸ್‌ನಲ್ಲಿ ಇಷ್ಟು ಸುಧಾರಣೆಯ ಪ್ರದರ್ಶನ ಭಾರತದಿಂದ ಯಾರೂ ನೀಡಿಲ್ಲ. ಒಲಿಂಪಿಕ್ಸ್‌ನಿಂದ ಗಾಲ್ಫ್ ಹೊರಗಿಡಲಾಗಿತ್ತು. ಮತ್ತೆ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಗಾಲ್ಫ್ ಮತ್ತೆ ಸೇರಿಸಲಾಗಿತ್ತು. ರಿಯೋದಲ್ಲಿ ಆಡಿದ್ದ ಅದಿತಿ 41ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು. ರಿಯೋಗೆ ಹೋಲಿಸಿದರೆ ಟೋಕಿಯೋದಲ್ಲಿ ಅದಿತಿ ಎಷ್ಟೋ ಉತ್ತಮ ಸಾಧನೆ ನೀಡಿದ್ದಾರೆ.



200ನೇ ಶ್ರೇಯಾಂಕಿತೆಗೆ ನಾಲ್ಕನೇ ಸ್ಥಾನ

ವಿಶೇಷವೆಂದರೆ ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅದಿತಿ 200ನೇ ಶ್ರೇಯಾಂಕದಲ್ಲಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಅದಿತಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿರುವುದು ಉತ್ತಮ ಸಾಧನೆಯೆನಿದೆ. ಈ ವಿಭಾಗದಲ್ಲಿ ಚಿನ್ನದ ಪದಕ ಯುನೈಟೆಡ್ ಸ್ಟೇಟ್ಸ್‌ ಅಮೆರಿಕಾದ ನೆಲ್ಲಿ ಕೊರ್ಡಾ ಪಾಲಾಯಿತು. ಕೊರ್ಡಾ 267 ಅಂಕ ಗಳಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ನಾಲ್ಕನೇ ಸುತ್ತಿನ ಸ್ಪರ್ಧೆ ನಡೆದ ಶನಿವಾರ ಮಳೆಯಿಂದಾಗಿ ಆಟ ಕೊಂಚ ನಿಲುಗಡೆಯಾಗಿದ್ದೂ ಕಾಣಿಸಿತು. ಕರ್ನಾಟಕದಿಂದ ಒಟ್ಟು ನಾಲ್ಕು ಸ್ಪರ್ಧಿಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಅವರೆಂದರೆ ಈಕ್ವೆಸ್ಟ್ರಿಯನ್ ನಲ್ಲಿ ಫೌವಾದ್ ಮಿರ್ಜಾ, ಮಹಿಳೆಯರ ಗಾಲ್ಫ್ ನಲ್ಲಿ ಅದಿತಿ ಅಶೋಕ್, ಪುರುಷರ ಗಾಲ್ಫ್ ನಲ್ಲಿ ಅನಿರ್ಬನ್ ಲಹಿರಿ ಮತ್ತು ಈಜು ಸ್ಪರ್ಧೆಯ 100 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ ನಟರಾಜ್. ಇವರೆಲ್ಲರ ಸ್ಪರ್ಧೆಯೂ ಕೊನೆಯೊಂಡಿದೆ, ಪದಕದಾಸೆ ಮೂಡಿಸಿದ್ದ ಅದಿತಿ ಉತ್ತಮ ಪೈಪೋಟಿಯೊಂದಿಗೆ ಗಮನ ಸೆಳೆದಿದ್ದಾರೆ.



ದುರದೃಷ್ಟಶಾಲಿಗಳ ಸಾಲಿಗೆ ಅದಿತಿ

ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕದಾಸೆ ಮೂಡಿಸಿ ಕೊನೇ ಕ್ಷಣದಲ್ಲಿ ನಾಲ್ಕನೇ ಸ್ಥಾನ ಪಡೆದು ನಿರಾಸೆ ಮೂಡಿಸಿದ ಭಾರತೀಯ ಅಥ್ಲೀಟ್‌ಗಳ ಸಾಲಿಗೆ ಅದಿತಿ ಅಶೋಕ್ ಕೂಡ ಸೇರಿಕೊಂಡಿದ್ದಾರೆ. ಈ ಕೆಟ್ಟ ದಾಖಲೆ ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ (1960ರ ರೋಮ್ ಒಲಿಂಪಿಕ್ಸ್, ಅಥ್ಲೆಟಿಕ್ಸ್), ಪಿಟಿ ಉ‍ಷಾ (1984ರ ಲಾಸ್ ಏಂಜಲ್ಸ್ ಒಲಿಂಪಿಕ್ಸ್, ಅಥ್ಲೆಟಿಕ್ಸ್), ಗುರುಚರಣ್ ಸಿಂಗ್ (2000ರ ಸಿಡ್ನಿ ಒಲಿಂಪಿಕ್ಸ್, ಬಾಕ್ಸಿಂಗ್), ಲಿಯಾಂಡರ್ ಪೇಸ್/ಮಹೇಶ್ ಭೂಪತಿ (2004ರ ಅಥೆನ್ಸ್ ಒಲಿಂಪಿಕ್ಸ್, ಟೆನಿಸ್), ಜಯದೀಪ್ ಕರ್ಮಾಕರ್ (2012ರ ಲಂಡನ್ ಒಲಿಂಪಿಕ್ಸ್, ಶೂಟಿಂಗ್), ಅಭಿನವ್ ಬಿಂದ್ರಾ (2016ರ ರಿಯೋ ಒಲಿಂಪಿಕ್ಸ್, ಶೂಟಿಂಗ್), ದೀಪಾ ಕರ್ಮಾಕರ್ (ರಿಯೋ ಒಲಿಂಪಿಕ್ಸ್, ಜಿಮ್ನ್ಯಾಸ್ಟಿಕ್), ರೋಹನ್ ಬೋಪಣ್ಣ/ಸಾನಿಯಾ ಮಿರ್ಝಾ (ರಿಯೋ ಒಲಿಂಪಿಕ್ಸ್, ಟೆನಿಸ್), ಅದಿತಿ ಅಶೋಕ್ ( 2021ರ ಟೋಕಿಯೋ ಒಲಿಂಪಿಕ್ಸ್, ಗಾಲ್ಫ್) ಹೆಸರಿನಲ್ಲಿದೆ.

(Kannada Copy of Mykhel Kannada)