ಬ್ರೇಕಿಂಗ್ ನ್ಯೂಸ್
08-01-23 10:12 pm Giridhar Shetty ಅಂಕಣಗಳು
ಮನಸ್ಸಿದ್ದರೆ ಮಾರ್ಗ ಅನ್ನೋದು ನಾಣ್ಣುಡಿ. ಆದರೆ ಮನಸ್ಸಿದ್ದರಷ್ಟೇ ಮಾರ್ಗ ತೆರೆದುಕೊಳ್ಳುವುದಿಲ್ಲ. ಅವಕಾಶಗಳನ್ನು ಬಳಸಿಕೊಳ್ಳುವುದೇ ನಾಜೂಕುತನ, ಉನ್ನತಿಗೆ ರಹದಾರಿ. ಈತನ ಕತೆ ಕೇಳಿದರೆ, ನಾವು ಹುಬ್ಬೇರಿಸುವುದಷ್ಟೇ ಅಲ್ಲ, ಹೀಗೂ ಇದೆಯೇ ಅನ್ನುವಷ್ಟು ಅಚ್ಚರಿ ಪಡಬಹುದು. ತನಗೇನೂ ಆಗದು ಎಂದು ಕೊರಗುವ ಮಂದಿಗೆ ಈತನ ಸಾಧನೆ ಪ್ರೇರಣಾದಾಯಿ. ಆ ವ್ಯಕ್ತಿ ತನ್ನ ಬಾಲ್ಯದಲ್ಲಿ ಅದೆಷ್ಟು ಕಷ್ಟಪಟ್ಟಿದ್ದ ಅಂದರೆ, ಹೆತ್ತವರ ಕಷ್ಟ ನೋಡಿ ಅವರೊಂದಿಗೆ ತಾನೂ ಬೀಡಿ ಸುರುಟಲು ಹೋಗುತ್ತಿದ್ದ. ಬಡತನದಿಂದಾಗಿ ತನ್ನ ಶಿಕ್ಷಣವನ್ನು ಒಂದು ಹಂತದಲ್ಲಿ ನಿಲ್ಲಿಸಿ, ಬೀಡಿ ಸುರುಟುವುದನ್ನೇ ಕಾಯಕ ಮಾಡಿಕೊಂಡಿದ್ದ. ಆದರೆ, ಅದೇ ವ್ಯಕ್ತಿಯೀಗ ಅಮೆರಿಕದ ಟೆಕ್ಸಾಸ್ ನಗರದಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಆ ವ್ಯಕ್ತಿಯ ಹೆಸರು ಸುರೇಂದ್ರನ್ ಕೆ. ಪಟೇಲ್. ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಇಳರಿತಟ್ಟು ನಿವಾಸಿ. ಬಡತನದ ಬೇಗುದಿಯಲ್ಲಿ ಬೇಯುತ್ತಲೇ ಬೆಳೆದ ಈ ವ್ಯಕ್ತಿಯ ಸಾಧನೆ ಬೆರಗು ಮೂಡಿಸುತ್ತದೆ. ಸುರೇಂದ್ರನ್ ಬಾಲ್ಯದಲ್ಲಿರುವಾಗಲೇ ಕಿತ್ತು ತಿನ್ನುವ ಬಡತನ. ಶಾಲೆ ಕಲಿಯುತ್ತಲೇ 9ನೇ ಕ್ಲಾಸಿನಲ್ಲಿ ಓದುತ್ತಲೇ ಮನೆಯವರ ಜೊತೆಗೆ ಬೀಡಿ ಸುರುಟಲು ಆರಂಭಿಸಿದ್ದ. ಇದರ ನಡುವೆಯೇ ಕಷ್ಟದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ, ಆನಂತರ ಮನೆಯ ದುಸ್ಥಿತಿಯಿಂದಾಗಿ ಶಾಲೆಯನ್ನೇ ಬಿಟ್ಟಿದ್ದ. ಮನೆ ಬಳಿಯ ಬೀಡಿ ಕಂಪನಿಯಲ್ಲಿ ಫುಲ್ ಟೈಮ್ ಆಗಿ ಬೀಡಿ ಸುರುಟುವ ಕೆಲಸಕ್ಕೆ ಸೇರಿದ್ದ. ಆದರೆ ಅಲ್ಲಿರುವಾಗಲೇ ಕೆಲವರು ಓದಿನತ್ತ ಗಮನ ಕೊಡಲು ಸೂಚಿಸಿದ್ದರು. ಈತನಿಗೂ ಓದಬೇಕು ಅನ್ನುವ ಛಲ ಇತ್ತು. ಅಲ್ಲಿ ಒಂದ್ಕಡೆ ಪಾರ್ಟ್ ಟೈಮಲ್ಲಿ ಬೀಡಿ ಕೆಲಸ ಮಾಡುತ್ತಿದ್ದಾಗಲೇ ಇಳರಿತಟ್ಟು ಕಾಲೇಜಿನಲ್ಲಿ ಪಿಯುಗೆ ಸೇರಿದ್ದ. ಆನಂತರ, ಪಯ್ಯನ್ನೂರು ಕಾಲೇಜಿನಲ್ಲಿ ಡಿಗ್ರಿ ಕಲಿಯಲು ಸೇರಿದ್ದ.
ಪದವಿ ಓದುತ್ತಿದ್ದರೂ, ಬೀಡಿ ಕೆಲಸಕ್ಕೆ ಹೋಗುತ್ತಿದ್ದುದರಿಂದ ದಿನವೂ ಕಾಲೇಜು ಹೋಗುವುದು ಕಷ್ಟವಾಗಿತ್ತು. ಪರೀಕ್ಷೆ ಬಂದಾಗ, ಉಪನ್ಯಾಸಕರು ಈತನ ಹಾಜರಾತಿ ಕಡಿಮೆಯಿದ್ದುದಕ್ಕೆ ನಿನಗೆ ಪರೀಕ್ಷೆ ಬರೆಯಲು ಕುಳಿತುಕೊಳ್ಳಲು ಬಿಡುವುದಿಲ್ಲ ಎಂದಿದ್ದರು. ಕಾಲೇಜಿಗೆ ಚಕ್ಕರ್ ಹೊಡೆದು ಪೋಕರಿ ಮಾಡುತ್ತಿದ್ದಾನೆಂದ್ಕೊಂಡು ಉಪನ್ಯಾಸಕರು ಹಾಗೆ ಹೇಳಿದ್ದರು. ಆದರೆ, ಸುರೇಂದ್ರನ್ ಗೆ ತನ್ನ ನಿಜ ವಿಚಾರವನ್ನು ಹೇಳಿಕೊಳ್ಳಲು ಅಳುಕು. ಬೀಡಿ ಕಟ್ಟುವ ವಿಚಾರ ಹೇಳಿಕೊಂಡು, ಅವರಿಂದ ಕರುಣೆ ದೊರಕಿಸಿಕೊಳ್ಳುವುದು ಇಷ್ಟವಿರಲಿಲ್ಲ. ಬದಲಿಗೆ, ನನಗೆ ಪರೀಕ್ಷೆ ಬರೆಯಲು ಅವಕಾಶ ಕೊಡಿ. ನಾನು ಪರೀಕ್ಷೆ ಪಾಸ್ ಆಗದೇ ಇದ್ದರೆ, ಕೋರ್ಸನ್ನೇ ಮುಂದುವರಿಸಲ್ಲ. ಒಂದು ಅವಕಾಶ ಕೊಡಿ ಎಂದು ಉಪನ್ಯಾಸಕರಲ್ಲಿ ಅಂಗಲಾಚಿದರು. ಪರೀಕ್ಷೆ ಫಲಿತಾಂಶ ಬಂದಾಗ, ಸುರೇಂದ್ರನ್ ಇಡೀ ಕಾಲೇಜಿಗೆ ಫಸ್ಟ್ ಬಂದಿದ್ದ.
ಆನಂತರ ಸುರೇಂದ್ರನ್ ತನ್ನಿಷ್ಟದಂತೆ ಕಾನೂನು ಪದವಿಗಾಗಿ ಕೋಜಿಕ್ಕೋಡ್ ಲಾ ಕಾಲೇಜಿಗೆ ಸೇರಿದ. ಆತನ ಮೊದಲ ವರ್ಷದ ಫೀಸನ್ನು ಗೆಳೆಯರು ಸೇರಿ ಕಟ್ಟಿದ್ದರು. ಕಾನೂನು ಓದುತ್ತಿದ್ದಾಗಲೇ ಕೋಜಿಕ್ಕೋಡಿನಲ್ಲಿ ಹೊಟೇಲ್ ನಡೆಸುತ್ತಿದ್ದ ಉತ್ತುಪ್ ಎಂಬವರಲ್ಲಿ ಕೆಲಸಕ್ಕೆ ಸೇರಿದರು. ಉತ್ತುಪೆಟ್ಟನ್ ಎಂದೇ ಸುರೇಂದ್ರನ್ ಅವರನ್ನು ನೆನೆಯುತ್ತಾರೆ. ನಾಲ್ಕು ವರ್ಷದ ಕಾನೂನು ಪದವಿ ಶುಲ್ಕವನ್ನು ಉತ್ತುಪ್ ಭರಿಸಿದ್ದರು. 1995ರಲ್ಲಿ ಕಾನೂನು ಪದವಿ ಪೂರೈಸಿದ ಸುರೇಂದ್ರನ್, ಹೊಸದುರ್ಗದಲ್ಲಿ ವಕೀಲರಾಗಿ ಪ್ರಾಕ್ಟೀಸ್ ನಡೆಸಿದ್ದರು. ಇದರ ನಡುವಲ್ಲೇ ಸುರೇಂದ್ರನ್, ಶುಭಾ ಎಂಬ ಯುವತಿಯನ್ನು ಮದುವೆಯಾದರು. ಶುಭಾ ನರ್ಸಿಂಗ್ ಕಲಿತಿದ್ದರಿಂದ ಕೆಲಸಕ್ಕಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದರು. 2004ರಲ್ಲಿ ಶುಭಾಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ಕೆಲಸ ಸಿಗ್ತು ಅಂತ ಪತ್ನಿಯೊಂದಿಗೆ ಸುರೇಂದ್ರನ್ ದೆಹಲಿಯತ್ತ ನಡೆದರು. ತನ್ನೊಂದಿಗೆ ಹೊಸದುರ್ಗದಲ್ಲಿ ಸೀನಿಯರ್ ಲಾಯರ್ ಆಗಿದ್ದ ಅಪ್ಪು ಕುಟ್ಟನ್ ಸಲಹೆಯಂತೆ, ಸುರೇಂದ್ರನ್ ಸುಪ್ರೀಂ ಕೋರ್ಟ್ ವಕೀಲರಾಗಿ ಪ್ರಾಕ್ಟೀಸ್ ಆರಂಭಿಸಿದರು. ದೆಹಲಿಯಲ್ಲಿರುವಾಗಲೇ ದಂಪತಿಗೆ ಎರಡನೇ ಮಗುವೂ ಆಗಿತ್ತು. 2007ರ ವೇಳೆಗೆ ಶುಭಾಗೆ ಅಮೆರಿಕದ ಹೌಸ್ಟನ್ ನಗರದಲ್ಲಿ ನರ್ಸಿಂಗ್ ಕೆಲಸದ ಆಫರ್ ಬರುತ್ತದೆ. ಒಳ್ಳೆ ಸಂಬಳ, ಅಮೆರಿಕದಲ್ಲಿ ಜೀವನ ಅನ್ನುವ ಹಂಬಲದಲ್ಲಿ ದಂಪತಿ ವಿದೇಶಕ್ಕೆ ಮುಖ ಮಾಡಿದರು.
ಇತ್ತ ಎರಡನೇ ಮಗು ಸಣ್ಣದಾಗಿತ್ತು. ಶುಭಾ ನೈಟ್ ಶಿಫ್ಟಲ್ಲಿ ಕೆಲಸ ಮಾಡುತ್ತಿದ್ದರೆ, ಇತ್ತ ಕೆಲಸವಿಲ್ಲದೇ ಮನೆಯಲ್ಲಿದ್ದ ಸುರೇಂದ್ರನ್ ಮಗುವನ್ನು ನೋಡಿಕೊಳ್ಳುವಂತಾಗಿತ್ತು. ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಲಾಯರ್ ಆಗಿದ್ದ ಸುರೇಂದ್ರನ್ ಪತ್ನಿಯ ಕಾರಣಕ್ಕಾಗಿ ಅಮೆರಿಕ ತೆರಳಿದ್ದರು. ತನ್ನ ವಕೀಲಿ ವೃತ್ತಿಯನ್ನು ಮುಂದುವರಿಸಲಾಗದ ಸಂಕಟ, ಚಡಪಡಿಕೆ ಅವರಲ್ಲಿತ್ತು. ತನ್ನ ಶಿಕ್ಷಣಕ್ಕೆ ತಕ್ಕಂಥ ಕೆಲಸಕ್ಕಾಗಿ ಅಲೆದಾಡಿದರೂ ಕೆಲಸ ಸಿಗಲಿಲ್ಲ. ಕೊನೆಗೆ, ಗ್ರೋಸರಿ ಅಂಗಡಿಯಲ್ಲಿ ಸೇಲ್ಸ್ ಮನ್ ಕೆಲಸಕ್ಕೆ ಸೇರಿದರು. ಅಲ್ಲಿರುವಾಗಲೇ ಅಮೆರಿಕದ ಕಾನೂನು ಮತ್ತು ಅಂತಾರಾಷ್ಟ್ರೀಯ ಕಾನೂನು ಕಲಿಯುವುದಕ್ಕಾಗಿ ಹೌಸ್ಟನ್ ಯುನಿವರ್ಸಿಟಿಯಲ್ಲಿ ಎಲ್ಎಲ್ಎಂ ಪದವಿಗೆ ಸೇರಿದರು. 2011ರಲ್ಲಿ ಸುರೇಂದ್ರನ್ ಎಲ್ಎಲ್ಎಂ ಪದವಿ ಪೂರೈಸಿ, ತನ್ನ ವಕೀಲ ವೃತ್ತಿಯನ್ನು ಮತ್ತೆ ಮುಂದುವರಿಸಿದರು.
2017ರಲ್ಲಿ ಸುರೇಂದ್ರನ್ ಮತ್ತು ಶುಭಾ ಅಮೆರಿಕದ ನಾಗರಿಕತ್ವ ಪಡೆದು, ಅಲ್ಲಿನ ಪ್ರಜೆಗಳಾದರು. ಇದೇ ಸಂದರ್ಭದಲ್ಲಿ ರಾಜಕೀಯವಾಗಿಯೂ ಸಕ್ರಿಯರಾಗಿದ್ದರಿಂದ ಟೆಕ್ಸಾಸ್ ಕ್ಷೇತ್ರದ ಡೆಮಾಕ್ರಟಿಕ್ ಪಕ್ಷದ ಸಂಸದರೊಬ್ಬರು ಸುರೇಂದ್ರನ್ ಗೆ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸಲು ಸಲಹೆ ನೀಡಿದರು. ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಯ ಆಯ್ಕೆಯಲ್ಲಿಯೂ ಜನರ ಸಹಭಾಗಿತ್ವ ಇದೆ. ಹಾಗಾಗಿ, ಕೆಲವರು ಭಾರತೀಯ ಮೂಲದ ವ್ಯಕ್ತಿಗೆ ಜನರ ಬೆಂಬಲ ಸಿಗಲಾರದು ಎಂದು ಇವರ ಸ್ಪರ್ಧೆಯ ಬಗ್ಗೆ ನಿರ್ಲಕ್ಷ್ಯ ತೋರಿದರು. ಆದರೆ ಸುರೇಂದ್ರನ್, ಅಮೆರಿಕ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಜನರು ಪ್ರಜಾಪ್ರಭುತ್ವದ ಮೇಲೆ ಅಚಲ ನಂಬಿಕೆ ಇಟ್ಟಿದ್ದಾರೆ. ಯಾವುದೇ ವ್ಯಕ್ತಿಯನ್ನು ಆತನ ವ್ಯಕ್ತಿಗತ ವಿಚಾರ ನೋಡದೆ ನಿರ್ಣಯ ನೀಡುತ್ತಾರೆಂಬ ನಂಬಿಕೆ ಹೊಂದಿದ್ದರು. 2020ರಲ್ಲಿ ಟೆಕ್ಸಾಸ್ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಮೊದಲ ಬಾರಿ ಸ್ಪರ್ಧಿಸಿದಾಗ, ಗೆಲುವು ಸಾಧ್ಯವಾಗಲಿಲ್ಲ. ಹಾಗಾಗಿ, 2022ರಲ್ಲಿ ಮತ್ತೆ ಸ್ಪರ್ಧಿಸಿದಾಗಲೂ ಅಂಜಿಕೆ ಇತ್ತು.
ಅಮೆರಿಕದಲ್ಲಿ ಎರಡು ಪಕ್ಷಗಳ ನೇರ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ನ್ಯಾಯಾಧೀಶರ ಹುದ್ದೆಗೂ ಡೆಮಾಕ್ರಟಿಕ್ ಪಾರ್ಟಿ ಮತ್ತು ರಿಪಬ್ಲಿಕನ್ ಪಾರ್ಟಿಯಿಂದಲೇ ಸ್ಪರ್ಧಿಸಬೇಕೆಂಬ ನಿಯಮ ಇದೆ. ಸುರೇಂದ್ರನ್ ಡೆಮಾಕ್ರಟಿಕ್ ಪಕ್ಷದ ಪರ ನಿಂತು ಕ್ಯಾಂಪೇನ್ ನಡೆಸಿದರು. ಎದುರಾಳಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಸುರೇಂದ್ರನ್ ಅವರನ್ನು ಭಾರತೀಯ ಮೂಲದ ವ್ಯಕ್ತಿಯೆಂದು ಜರೆದರು. ಆದರೆ, ಫಲಿತಾಂಶ ಬಂದಾಗ ಸುರೇಂದ್ರನ್ ಜಯ ಸಾಧಿಸಿದ್ದರು. ಟೆಕ್ಸಾಸ್ ನಗರದ 240ನೇ ಜಿಲ್ಲಾ ನ್ಯಾಯಾಧೀಶರಾಗಿ ಸುರೇಂದ್ರನ್ ಕೆ. ಪಟೇಲ್ ಇದೀಗ ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲಿ ಬೀಡಿ ಸುರುಟುತ್ತಿದ್ದ ಅದೇ ಕೈಗಳಲ್ಲಿ ನ್ಯಾಯ ತೀರ್ಮಾನದ ಸುತ್ತಿಗೆ ಹಿಡಿದು ಪ್ರಜಾಸತ್ತೆಯ ಶಾಸನ ಪಾಲಿಸಲು ಮುಂದಾಗಿದ್ದಾರೆ. ಸುರೇಂದ್ರನ್ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದರೂ, ತನ್ನ ಬಾಲ್ಯ, ಬಡತನದ ಬದುಕನ್ನು ಮರೆತಿಲ್ಲ. ಇತ್ತೀಚೆಗೆ ಸುರೇಂದ್ರನ್ ತನ್ನ ಹುಟ್ಟೂರಿಗೆ ಬಂದಾಗ, ಹೊಸದುರ್ಗ ನ್ಯಾಯಾಲಯದ ಆವರಣದಲ್ಲಿ ವಕೀಲರು ಸೇರಿ ಸನ್ಮಾನಿಸಿದಾಗ, ಹಳೆಯದನ್ನು ಮೆಲುಕು ಹಾಕಿದರು. ತನ್ನ ಬಾಲ್ಯದ ಬಡತನ, ಬೀಡಿ ಸುರುಟಿದ ದಿನಗಳೇ ತನ್ನ ಸಾಧನೆಗೆ ಪ್ರೇರಣೆ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. ಮನೋರಮಾ ಪತ್ರಿಕೆ ಪ್ರಕಾರ, ಒಬ್ಬ ಮಲಯಾಳಿ ಅಮೆರಿಕದಲ್ಲಿ ನ್ಯಾಯಾಧೀಶರ ಹುದ್ದೆಗೇರಿದ್ದು ಇದೇ ಮೊದಲಂತೆ. ಕನ್ನಡಿಗ ನ್ಯಾಯಾಧೀಶರು ಅಮೆರಿಕದಲ್ಲಿ ಇದ್ದಾರೆಯೇ ಗೊತ್ತಿಲ್ಲ..
Author: Giridhar Shetty
Who is Surendran K Pattel, 51-year-old who once rolled beedis in Kerala now a judge in America.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 10:45 pm
HK News Desk
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm