ಪದವಿಯಲ್ಲಿ ಭಾಷೆಗಳ ಕಲಿಕೆಯನ್ನು ಕೊಲ್ಲುತ್ತಿರುವ ಖಾಸಗಿ ವಿವಿಗಳು ; ಎನ್ಇಪಿ ಹೆಸರಲ್ಲಿ ಕನ್ನಡಕ್ಕೇ ಕತ್ತರಿ! ಭಾಷಾ ಅಭಿವೃದ್ಧಿ ಪ್ರಾಧಿಕಾರಗಳು ಮೌನವೇಕೆ ?

17-07-26 07:02 pm       ರಾಮಲಿಂಗಪ್ಪ ಟಿ. ಬೇಗೂರು, ಹಿರಿಯ ಲೇಖಕರು   ಅಂಕಣಗಳು

ಕರ್ನಾಟಕದ ಬಹುತೇಕ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು 'ಡೀಮ್ಡ್ ಟು ಬಿ ಯುನಿವರ್ಸಿಟಿ'ಗಳು 'ರಾಷ್ಟ್ರೀಯ ಶಿಕ್ಷಣ ಕ್ರಮ' (ಎನ್‌ಇಪಿ) ಅನುಸರಿಸುತ್ತೇವೆ ಎಂದು ಹೇಳಿಕೊಂಡು, ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ಅಸಡ್ಡೆ ತೋರಿಸುತ್ತಿವೆ. ಕೆಲವು ವಿವಿಗಳಂತೂ ಭಾಷಾ ಕಲಿಕೆಯನ್ನು ಸಂಪೂರ್ಣ ನಿರಾಕರಿಸಿವೆ. ಎನ್‌ಇಪಿ ಮತ್ತು ಯುಜಿಸಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ವೆಚ್ಚ ಕೇಂದ್ರಿತ ಮತ್ತು ವ್ಯಾಪಾರ ಕೇಂದ್ರಿತ ಶಿಕ್ಷಣವನ್ನಾಗಿ ಮಾಡುತ್ತಿವೆ.

ಕರ್ನಾಟಕದ ಬಹುತೇಕ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು 'ಡೀಮ್ಡ್ ಟು ಬಿ ಯುನಿವರ್ಸಿಟಿ'ಗಳು 'ರಾಷ್ಟ್ರೀಯ ಶಿಕ್ಷಣ ಕ್ರಮ' (ಎನ್‌ಇಪಿ) ಅನುಸರಿಸುತ್ತೇವೆ ಎಂದು ಹೇಳಿಕೊಂಡು, ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ಅಸಡ್ಡೆ ತೋರಿಸುತ್ತಿವೆ. ಕೆಲವು ವಿವಿಗಳಂತೂ ಭಾಷಾ ಕಲಿಕೆಯನ್ನು ಸಂಪೂರ್ಣ ನಿರಾಕರಿಸಿವೆ. ಎನ್‌ಇಪಿ ಮತ್ತು ಯುಜಿಸಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ವೆಚ್ಚ ಕೇಂದ್ರಿತ ಮತ್ತು ವ್ಯಾಪಾರ ಕೇಂದ್ರಿತ ಶಿಕ್ಷಣವನ್ನಾಗಿ ಮಾಡುತ್ತಿವೆ. ಇದರಿಂದ ಭಾಷಾ ಕಲಿಕೆಗೆ ಮಾತ್ರ ಪೆಟ್ಟು ಬೀಳುತ್ತಿಲ್ಲ, ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಭಾಷಾ ಬಳಕೆ ಮತ್ತು ಕನ್ನಡದ ಮೂಲಕ ಜ್ಞಾನ ಸೃಷ್ಟಿಸುವ ಸಾಧ್ಯತೆಗೂ ಕೊಡಲಿ ಪೆಟ್ಟು ಬೀಳುತ್ತಿದೆ.

ಬೆಂಗಳೂರಿನ ಕೆಲವು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಕಲಿಕೆಯ ನಾಲ್ಕು ಸೆಮಿಸ್ಟ‌ರ್ ಪಠ್ಯವನ್ನು ಒಂದು, ಎರಡು, ಮೂರು ಸೆಮಿಸ್ಟರ್‌ಗಳಿಗೆ ಮನಬಂದಂತೆ ಇಳಿಸಲಾಗಿದೆ. ಕೆಲವು ಯೂನಿವರ್ಸಿಟಿಗಳಲ್ಲಂತೂ ಕನ್ನಡ ಇಲ್ಲವೇ ಇಲ್ಲ! ಇವರೆಲ್ಲ ಅಕಾಡೆಮಿಕ್ ಕೌನ್ಸಿಲ್‌ಗಳಲ್ಲಿ, 'ಬಿಒಎಸ್'ಗಳಲ್ಲಿ ತಮ್ಮ ಮಾತು ಕೇಳುವ ಸದಸ್ಯರನ್ನು ಮಾತ್ರ ನೇಮಿಸಿಕೊಂಡು, ಆಯಾ ವಿಭಾಗದ ಅಧ್ಯಾಪಕರನ್ನು ಕೆಲಸದಿಂದ ತೆಗೆಯುವ ಭಯ ಹುಟ್ಟಿಸಿ, ಅವರಿಂದಲೇ ತಮಗೆ ಬೇಕಾದ ಹಾಗೆ ಶಿಫಾರಸುಗಳನ್ನು ಮಾಡಿಸಿಕೊಂಡು, ಒಬ್ಬೊಬ್ಬರು ಒಂದೊಂದು ರೀತಿಯ ಭಾಷಾ ಕಲಿಕೆಯ ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡಿದ್ದಾರೆ: ಕೆಲವರು ಭಾಷಾ ಕಲಿಕೆಯನ್ನೇ ತಿರಸ್ಕರಿಸಿದ್ದಾರೆ. ಹೀಗೆ ಸ್ವಾಯತ್ತತೆಯ ಹೆಸರಿನಲ್ಲಿ ಹಾಗೂ ಶೈಕ್ಷಣಿಕ ಸ್ಥಾತಂತ್ರ್ಯದ ಮುಖವಾಡದಲ್ಲಿ ಭಾಷೆಗಳನ್ನು ಕೊಂದು ಹಾಕುವುದು ಸರಿಯೇ? ಎಲ್ಲರೂ ಅನುಸರಿಸಬೇಕಾದ ಸಾಮಾನ್ಯ ನಿಯಮಗಳನ್ನು ಗಾಳಿಗೆ ತೂರುವುದು ಸರಿಯೆ?

ಹಾಗೆ ನೋಡಿದರೆ ಒಂದೊಂದು ಪದವಿಗೂ ಪದವಿ ವಿಶಿಷ್ಟ ಮತ್ತು ಆಯಾ ಶಿಸ್ತು ವಿಶಿಷ್ಟ ಪ್ರತ್ಯೇಕ ಪಠ್ಯಗಳನ್ನು ಅಳವಡಿಸುವ ಅಗತ್ಯವಿದೆ. ವಾಣಿಜ್ಯ ಶಾಸ್ತ್ರ, ಸಮಾಜಕಾರ್ಯ, ಗಣಕ ವಿಜ್ಞಾನ, ಗಗನಯಾನ, ಹೀಗೆ ಅಯಾಯ ಕೋರ್ಸುಗಳ ಆಗತ್ಯಕ್ಕೆ ತಕ್ಕಂತೆ ಕೋರ್ಸು ವಿಶಿಷ್ಟ ಭಾಷಾ ಕಲಿಕೆಗೆ ಒತ್ತು ಕೊಡಬೇಕಾದುದು ಇಂದಿನ ಅಗತ್ಯ. ಹಾಗೆಯೇ ಪ್ರತ್ಯೇಕ ಪಠ್ಯಗಳನ್ನು ಇರಿಸಬೇಕಾದುದು ಅನಿವಾರ್ಯ. ಆದರೆ, ಯಾರೂ ಹಾಗೆ ಮಾಡುತ್ತಿಲ್ಲ. ಎಲ್ಲ ಕೋರ್ಸುಗಳಿಗೂ ಒಂದೇ ರೀತಿಯ ಸಾಮಾನ್ಯ ಸಾಹಿತ್ಯ ಪಠ್ಯಗಳನ್ನು ಇಡುತ್ತಿದ್ದಾರೆ. ಇದು ತಪ್ಪು. ತಾವು ಓದಿದ ಜ್ಞಾನ ಶಾಖೆಗಳಲ್ಲಿ ಕನ್ನಡದಲ್ಲಿ ಜ್ಞಾನ ಸೃಷ್ಟಿಸಬಲ್ಲ ವಿದ್ಯಾರ್ಥಿಗಳನ್ನು ನಾವು ಸೃಷ್ಟಿಸಬೇಕಲ್ಲವೆ? ಅಯಾ ಜ್ಞಾನ ಶಾಖೆಗಳಲ್ಲಿ ಸೃಷ್ಟಿಯಾಗಿರುವ ಕನ್ನಡ ಭಾಷಾ ಬಳಕೆಯನ್ನು ಕಲಿಕೆಗೆ ಒಡ್ಡಬೇಕಲ್ಲವೆ?

ವಿವಿಧ ಮುಕ್ತ ಆಯ್ಕೆಗಳನ್ನೂ (ಓಪನ್ ಎಲೆಕ್ಟಿವ್) ಪದವಿಯಲ್ಲಿ ಜಾರಿ ಮಾಡುವ ಅಗತ್ಯವಿದೆ. ಇದನ್ನೂ ಬಹುತೇಕರು ಅನುಸರಿಸುತ್ತಿಲ್ಲ. ಭಾಷಾ ಕೇಂದ್ರಿತವಾದ ಅನುವಾದ ಚಟುವಟಿಕೆ, ಸ್ಪರ್ಧಾತ್ಮಕ ಅಧ್ಯಯನ, ಸಿನಿಮಾ ಮತ್ತು ರಂಗಭೂಮಿ ಅಧ್ಯಯನ, ಡಿಜಿಟಲ್ ಕೌಶಲ ಗಳಿಕೆ, ರೇಡಿಯೊ ಜಾಕಿ ವೃತ್ತಿ ಕಲಿಕೆ, ಹೀಗೆ ಹತ್ತು ಹಲವು ಮುಕ್ತ ಆಯ್ಕೆಗಳನ್ನು ಪದವಿಗಳಲ್ಲಿ ಅಳವಡಿಸುವ ಅಗತ್ಯವಿದೆ. ಅವುಗಳಲ್ಲಿ ತಮಗೆ ಬೇಕಾದ ಭಾಷಾಕೇಂದ್ರಿತ ಜ್ಞಾನ ಅಥವಾ ಕೌಶಲಗಳನ್ನು ವಿದ್ಯಾರ್ಥಿಗಳು ಪಡೆಯುವ ಅವಕಾಶವನ್ನು ಸೃಷ್ಟಿಸಬೇಕಿದೆ. ಆದರೆ, ಇದನ್ನೂ ಬಹುತೇಕರು ಮಾಡುತ್ತಿಲ್ಲ.

ಕನ್ನಡ ಭಾಷೆಯೇ ಗೊತ್ತಿಲ್ಲದ ಕನ್ನಡೇತರರು ಕರ್ನಾಟಕದಲ್ಲಿ ಕನ್ನಡದ ಗಂಧವೇ ಇಲ್ಲದೆ ಪದವಿ ಅಥವಾ ಯಾವುದೇ ಬಗೆಯ ಶಿಕ್ಷಣ ಪಡೆದು ಹೋಗುವ ಅವಕಾಶ ಇಲ್ಲಿದೆ! ಸರ್ಕಾರವೇ ಆರಂಭಿಸಿರುವ 'ಕರ್ನಾಟಕ ಪಬ್ಲಿಕ್ ಸ್ಕೂಲ್'ಗಳಲ್ಲೂ (ಕೆಪಿಎಸ್) ಇಂಗ್ಲಿಷ್ ಕಡ್ಡಾಯ ಮಾಡಿ, ಕನ್ನಡ ಕಲಿಕೆಗೆ ಅವಕಾಶ ಇಲ್ಲದಂತೆ ಮಾಡಲಾಗಿದೆ. ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ದೇಶಗಳಲ್ಲಿ ಹಾಗಿಲ್ಲ. ಅಷ್ಟೇ ಯಾಕೆ, ನಮ್ಮ ಪಕ್ಕದ ತಮಿಳುನಾಡು, ಮಹಾರಾಷ್ಟ್ರಗಳನ್ನು ನೋಡಿದರೆ ಅಲ್ಲಿ ಸ್ಥಳೀಯ ಭಾಷೆಯನ್ನು ಪೂರ್ಣ ನಿರಾಕರಿಸಿ ಶಿಕ್ಷಣ ಪೂರೈಸುವ ಸಾಧ್ಯತೆಯೇ ಇಲ್ಲ. ಕರ್ನಾಟಕದಲ್ಲಿ ಮಾತ್ರ ಈ ಸಾಧ್ಯತೆಯಿದೆ! ನಮ್ಮ ನೆಲದಲ್ಲಿ ಶಿಕ್ಷಣವನ್ನು ಮಾರುವವರು ಕನ್ನಡವನ್ನು ಕನಿಷ್ಠ ಪಕ್ಷ ವ್ಯವಹಾರದ ನೆಲೆಗಟ್ಟಿನಲ್ಲಾದರೂ ಕಲಿಸಬೇಕಲ್ಲವೆ?

ಈ ನೆಲದ ನಿಯಮದ ಅನುಸಾರ ಪದವಿಗಳಲ್ಲಿ ಪ್ರಾಥಮಿಕ ವ್ಯಾವಹಾರಿಕ ಕನ್ನಡವನ್ನು ಕನ್ನಡೇತರರಿಗೆಲ್ಲ ಅಳವಡಿಸುವ ಅಗತ್ಯವಿದೆ. ಆದರೆ, ಬಹುತೇಕರು ಇದನ್ನು ಮಾಡುತ್ತಿಲ್ಲ. ಆದರೆ, ತ್ರಿಭಾಷಾ ಸೂತ್ರವನ್ನು ಮಾತ್ರ ನಮ್ಮ ಮಕ್ಕಳ ಮೇಲೆ ಹೇರುತ್ತಿದ್ದಾರೆ! ಪದವಿಯಲ್ಲಂತೂ ಭಾಷೆಯೇ ಇಲ್ಲದ ಕಲಿಕೆ ಇದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಅನೇಕರಿಗೆ ಭಾಷೆ ಎಂದರೆ ಅನಗತ್ಯವಾದುದು ಎಂಬ ಭಾವನೆ ಇದೆ. ಭಾಷೆ ಎಂದರೆ ಅದು ಕೇವಲ ವರ್ಕ್ ಲೋಡ್ ಪ್ರಶ್ನೆ ಅಲ್ಲ; ಖರ್ಚಿನ ಪ್ರಶ್ನೆ ಅಲ್ಲ. ಅದು ಗ್ರಹಿಕೆಯ ಬೇರು, ಜ್ಞಾನದ ವಾಹಕ ಮತ್ತು ವಿವಿಧ ಡೊಮೈನ್ ನಾಲೆಜ್ ಸೃಷ್ಟಿಯ ಸಾಧನ ಎಂದು ಇವರಿಗೆಲ್ಲ ಮನವರಿಕೆ ಮಾಡಬೇಕಿದೆ. ಎಲ್ಲ ಜ್ಞಾನವೂ ಭಾಷೆಯ ಮೂಲಕವೇ ಅಭಿವ್ಯಕ್ತಿ ಪಡೆಯಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಖಾಸಗಿ ವ್ಯಾಪಾರಿ ಧೋರಣೆಯನ್ನು ತಿದ್ದುವುದು ಹೇಗೆ?

ಕರ್ನಾಟಕ ಸರ್ಕಾರ 2022ರಲ್ಲಿ 'ಕರ್ನಾಟಕ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ' ನಿಯಮವನ್ನು ಜಾರಿಗೆ ತಂದಿದೆ. ಇದರ 11ನೇ ನಿಯಮವು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಅಧಿಕೃತ ಕನ್ನಡ ಭಾಷಾ ಜಾರಿ ನಿರ್ದೇಶನಾಲಯ ಆಗಿರತಕ್ಕದ್ದು ಎಂದು ಹೇಳುತ್ತದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ. ಅಧಿಕೃತ ಭಾಷಾ ಜಾರಿ ನಿರ್ದೇಶನಾಲಯದ ಜೊತೆಗೆ ಉನ್ನತ ಶಿಕ್ಷಣ ಮತ್ತಿತರ ವೃತ್ತಿ ಶಿಕ್ಷಣಗಳಲ್ಲಿ ಭಾಷಾ ಕಲಿಕಾ ಜಾರಿ ನಿರ್ದೇಶನಾಲಯ ಮತ್ತು ಅಧಿಕಾರಿಯನ್ನು ನೇಮಿಸುವ ತಿದ್ದುಪಡಿಯನ್ನು ಈ ಅಧಿನಿಯಮಕ್ಕೆ ತರುವ ಅಗತ್ಯವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನೇ ಅದಕ್ಕೆ ಜಾರಿ ನಿರ್ದೇಶನಾಲಯವಾಗಿಯೂ, ಪ್ರಾಧಿಕಾರದ ಅಧ್ಯಕ್ಷರನ್ನು ಜಾರಿ ಅಧಿಕಾರಿ ಆಗಿಯೂ ಮಾಡಬೇಕಾದ ಅಗತ್ಯವಿದೆ.

ಇದೇ ಅಧಿನಿಯಮದ 13(1) ಮತ್ತು (1)ರ ಅನುಸಾರ, 'ಉನ್ನತ, ತಾಂತ್ರಿಕ, ವೃತ್ತಿಶಿಕ್ಷಣ ವ್ಯಾಸಂಗದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ನಿಯಮಿಸಲಾದಂತೆ ವೃತ್ತಿಪರ ವ್ಯಾಸಂಗಕ್ಕೆ ಸಂಬಂಧಿಸಿದ ಕನ್ನಡ ಭಾಷೆಯ ಪ್ರಾಯೋಗಿಕ ಹಾಗೂ ಕಾರ್ಯಾತ್ಮಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಬೋಧಿಸತಕ್ಕದ್ದು. ಎಸ್ಎಸ್ಎಲ್‌ಸಿ ಮಟ್ಟದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ನಿಯಮಿಸಲಾದಂತೆ ಮೂಲ ಕನ್ನಡ ಭಾಷೆಯನ್ನೂ ಒಂದು ವಿಷಯವಾಗಿ ಬೋಧಿಸತಕ್ಕದ್ದು' ಎಂದು ಹೇಳಲಾಗಿದೆ. ಆದರೆ, 13ನೇ ನಿಯಮದ ಅನುಸಾರ ಇರುವ 'ವಿಶ್ವವಿದ್ಯಾಲಯಗಳು ನಿಯಮಿಸಲಾದಂತೆ' ಎಂಬ ಪದಗುಚ್ಛವನ್ನು ತಿದ್ದುಪಡಿ ಮಾಡಿ, ಕಡ್ಡಾಯ ಕಲಿಕೆಗೆ ಅಳವಡಿಸಬೇಕು ಎಂದು ಬದಲಿಸಬೇಕಿದೆ. ಈ 13ನೇ ನಿಯಮವನ್ನೂ ಯಾರೂ ಇಲ್ಲಿ ಪಾಲಿಸುತ್ತಿಲ್ಲ. ಹಾಗಾದರೆ ಇಲ್ಲಿನ ನೆಲ, ಗಾಳಿ, ನೀರು ಬಳಸಿ ಶಿಕ್ಷಣದ ಅಂಗಡಿಗಳನ್ನು ತೆರೆದಿರುವ ಖಾಸಗಿ ವಿವಿಗಳು ಕನ್ನಡವನ್ನು ಕೊಂದು ಶಿಕ್ಷಣವನ್ನು ಮಾರಲು ನಾವು ಅವಕಾಶ ಕೊಟ್ಟಿರುವುದಾದರೂ ಏತಕ್ಕೆ?

ಸಂವಿಧಾನದಲ್ಲಿ ಶಿಕ್ಷಣವನ್ನು 'ಸಮವರ್ತಿ ಪಟ್ಟಿ'ಯಲ್ಲಿ ಇರಿಸಲಾಗಿದೆ. ಹಾಗಾಗಿಯೇ ನಮ್ಮಲ್ಲಿ ನಮ್ಮದೇ 'ರಾಜ್ಯ ಶಿಕ್ಷಣ ನೀತಿ'ಯನ್ನು ಮಾಡಿಕೊಳ್ಳಲು ನಮಗೆ ಸಾಧ್ಯವಾಗಿದೆ. ಆದರೆ, ನಮ್ಮ ಕಣ್ಣೆದುರೇ ಇಂತಹ ಭಾಷಾಹತ್ಯೆ ನಡೆಯುತ್ತಿದ್ದರೂ ನಾವು ನೋಡಿಕೊಂಡು ಸುಮ್ಮನೆ ಇದ್ದೇವೆ. ಪದವಿಯಲ್ಲಿ ಎರಡೇ ವರ್ಷಗಳಿಗೆ ಭಾಷಾ ಕಲಿಕೆ ಸೀಮಿತ ಮಾಡಿರುವುದನ್ನು ಪ್ರಶ್ನಿಸದೆ ಇದ್ದೇವೆ. ಪದವಿಯ ಮೂರೂ ವರ್ಷಗಳಿಗೆ ಭಾಷಾ ಕಲಿಕೆಯನ್ನು ಜಾರಿ ಮಾಡುವಂತೆ ಈಗಾಗಲೇ ಎಸ್‌ಇಪಿ ಶಿಫಾರಸು ಮಾಡಿದೆ. ಆದರೆ, ಎಸ್‌ಇಪಿ ಶಿಫಾರಸುಗಳನ್ನು ರಾಜ್ಯ ಸರ್ಕಾರ ಇದುವರೆಗೂ ಅಂಗೀಕರಿಸಿಲ್ಲ. ಜಾರಿಗೊಳಿಸಿಲ್ಲ, ಸಾರ್ವಜನಿಕ ಚರ್ಚೆಗೆ ಒಳಪಡಿಸುವ ಉತ್ಸಾಹವನ್ನೂ ವ್ಯಕ್ತಪಡಿಸಿಲ್ಲ.

ಇನ್ನು ವಿಶ್ವದರ್ಜೆಯ ಶಾಲೆಗಳೆಂದು ಬಿಂಬಿಸಿಕೊಳ್ಳುವ 'ಐಬಿ ಸ್ಕೂಲು'ಗಳ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ಅವು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ. ರಾಜ್ಯ ಸರ್ಕಾರದ ನಿಯಂತ್ರಣದಲ್ಲೂ ಇಲ್ಲ. ಹಾಗೆಯೇ, ಖಾಸಗಿ ವಿಶ್ವವಿದ್ಯಾಲಯಗಳನ್ನು ಪ್ರಶ್ನೆ ಮಾಡುವವರು ರಾಜ್ಯದಲ್ಲಿ ಯಾರೂ ಇಲ್ಲ ಎಂಬಂತಾಗಿದೆ. ಶೈಕ್ಷಣಿಕ ಸ್ವಾತಂತ್ರ್ಯದ ಹೆಸರಿನಲ್ಲಿ, ಸ್ವಾಯತ್ತತೆಯ ಹೆಸರಿನಲ್ಲಿ ಶಿಕ್ಷಣ ಪದ್ಧತಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ವರ್ತಿಸಲು ಅವಕಾಶ ಮಾಡಿಕೊಡುವುದು ಸರಿಯಲ್ಲ. ಕನಿಷ್ಠ ಭಾಷಾ ಕಲಿಕೆಗೆ ಅದರೂ ಕರ್ನಾಟಕದಲ್ಲಿನ ಎಲ್ಲ ಖಾಸಗಿ ವಿವಿಗಳು ಒಂದು ಸಮಾನ ಕಲಿಕಾ ಚೌಕಟ್ಟನ್ನು ಅನುಸರಿಸಬೇಕು. ಹೀಗೆ ಸಮಾನ ಚೌಕಟ್ಟನ್ನು ಅನುಸರಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ಹಾಗೆಯೇ, ದೇಶದ ಎಲ್ಲ ಭಾಗಗಳಲ್ಲೂ ಇರುವ ಈ ಸಮಸ್ಯೆಯ ಬಗ್ಗೆ ಯುಜಿಸಿ ಕೂಡ ಮೌನ ಮುರಿಯಬೇಕು. (ಕೃಪೆ - ಪ್ರಜಾವಾಣಿ)

Several private universities and deemed-to-be universities in Karnataka are facing criticism for allegedly weakening language education in undergraduate programmes while claiming to implement the National Education Policy (NEP). Educationists and language advocates have alleged that some institutions have drastically reduced language courses, while others have removed them altogether, raising concerns over compliance with NEP and University Grants Commission (UGC) guidelines.