ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 350 ಶುಲ್ಕದ ಬರೆ, ಅಡಿಟ್ ಇಲ್ಲದ, ಅಕ್ರಮ ಅಲ್ಯುಮ್ನಿ ಹೆಸರಲ್ಲಿ ಕೆಲವರದ್ದೇ ಪಾರುಪತ್ಯ!

15-09-26 09:18 pm       HK News Staffer   ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗುತ್ತಿದೆ. ವಿವಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಮಂಗಳಾ ಅಲ್ಯುಮ್ನಿ ಅಸೋಸಿಯೇಶನ್ ಕಳೆದ 15 ವರ್ಷಗಳಲ್ಲಿ ಅನಧಿಕೃತವಾಗಿ ನಡೆದುಕೊಂಡು ಬಂದಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಘದ ಹಾಲಿ ಅಧ್ಯಕ್ಷರೇ ಜಿಲ್ಲಾ ನೋಂದಣಾಧಿಕಾರಿಗೆ ದೂರು ನೀಡಿದ್ದಾರೆ.

ಮಂಗಳೂರು, ಸೆ.15: ಮಂಗಳೂರು ವಿಶ್ವವಿದ್ಯಾನಿಲಯ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗುತ್ತಿದೆ. ವಿವಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಮಂಗಳಾ ಅಲ್ಯುಮ್ನಿ ಅಸೋಸಿಯೇಶನ್ ಕಳೆದ 15 ವರ್ಷಗಳಲ್ಲಿ ಅನಧಿಕೃತವಾಗಿ ನಡೆದುಕೊಂಡು ಬಂದಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಘದ ಹಾಲಿ ಅಧ್ಯಕ್ಷರೇ ಜಿಲ್ಲಾ ನೋಂದಣಾಧಿಕಾರಿಗೆ ದೂರು ನೀಡಿದ್ದಾರೆ.

ಮಂಗಳಾ ಅಲ್ಯುಮ್ನಿ ಅಸೋಸಿಯೇಶನ್ ಎನ್ನುವ ಹೆಸರಲ್ಲಿ ಪಿಜಿ ಹಳೆ ವಿದ್ಯಾರ್ಥಿಗಳ ಸಂಘವನ್ನು 2007ರಲ್ಲಿ ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆಯಡಿ ಅಸ್ತಿತ್ವಕ್ಕೆ ತರಲಾಗಿತ್ತು. ಕಾಯ್ದೆ ಪ್ರಕಾರ, ಪ್ರತಿ ವರ್ಷ ಪದಾಧಿಕಾರಿಗಳ ಬದಲಾವಣೆ, ಅಡಿಟ್ ಪಟ್ಟಿಯನ್ನು ಜಿಲ್ಲಾ ನೋಂದಣಾಧಿಕಾರಿಗೆ ಸಲ್ಲಿಸಿ ಸಂಘವನ್ನು ನವೀಕರಣ ಮಾಡಿಕೊಳ್ಳಬೇಕು. ಆದರೆ, 2009ರ ಬಳಿಕ ಸಂಘವನ್ನು ನವೀಕರಣ ಮಾಡಿದ್ದಾಗಲೀ, ಅಡಿಟ್ ವರದಿಯನ್ನು ಸಲ್ಲಿಸಿದ್ದಾಗಲೀ ಮಾಡಿಲ್ಲ. ಹಾಗಿದ್ದರೂ, ಮಂಗಳೂರು ವಿವಿಯಲ್ಲಿ ಎರಡನೇ ವರ್ಷದಲ್ಲಿರುವಾಗಲೇ ಪಿಜಿ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಹಳೆ ವಿದ್ಯಾರ್ಥಿಗಳ ಸಂಘದ ಶುಲ್ಕವೆಂದು ಪ್ರತಿ ವರ್ಷ 350 ರೂ.ನಂತೆ ಸಂಗ್ರಹ ಮಾಡುತ್ತ ಬರಲಾಗಿದೆ.

16 ವರ್ಷಗಳಿಂದ ಒಬ್ಬರೇ ಅಧ್ಯಕ್ಷರು, ಕೆಲವೊಬ್ಬರು ಪದಾಧಿಕಾರಿಗಳು ಕೂಡ ನಿರಂತರವಾಗಿ ‘ಸೇವೆ’ ಸಲ್ಲಿಸುತ್ತ ಬಂದಿದ್ದಾರೆ. ಪ್ರತಿ ವರ್ಷ ಕೆಲವೇ ಮಂದಿ ಸೇರಿಕೊಂಡು ವಾರ್ಷಿಕ ಸಭೆ ನಡೆಸಿ, ತಮ್ಮಲ್ಲೇ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಬಂದಿದ್ದಾರೆ. ಸಂಘ ಅಸ್ತಿತ್ವಕ್ಕೆ ಬಂದು 18-19 ವರ್ಷಗಳಾದರೂ, ಮಂಗಳೂರು ವಿವಿಯ ಆರಂಭದಲ್ಲಿ ಕಲಿತು ಹೋದ ಪರವೂರಿನವರೂ, ಈ ಊರಿನ ಹಳಬರೂ ತಮ್ಮ ಸದಸ್ಯತ್ವ ಕೊಟ್ಟು ಅಜೀವ ಸದಸ್ಯರಾಗಿದ್ದಾರೆ. ಆದರೆ ಅವರಿಗೆ ಯಾರಿಗೂ ಸದಸ್ಯತ್ವದ ಬಗೆಗಾಗಲೀ, ವಾರ್ಷಿಕ ಸಭೆ, ಚುನಾವಣೆ ನಡೆಯುವ ಬಗ್ಗೆಯಾಗಲೀ ಮಾಹಿತಿ ಇಲ್ಲ.

ಹಾಲಿ ಎಷ್ಟು ಮಂದಿ ಸದಸ್ಯರಿದ್ದಾರೆ, ಈವರೆಗೆ ಎಷ್ಟು ಸದಸ್ಯತ್ವ ಕಲೆಕ್ಷನ್ ಆಗಿದೆ, ಸಂಘದ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಕಲೆಕ್ಷನ್ ಆಗಿದೆ ಎನ್ನುವ ಬಗ್ಗೆಯೂ ಮಾಹಿತಿ ಇಲ್ಲ. ಪ್ರತಿ ವರ್ಷ ಅಡಿಟ್ ನಡೆಸುವುದೂ ಇಲ್ಲ. ಹೀಗಾಗಿ ಈ ಸಂಘವನ್ನು ಬರ್ಖಾಸ್ತು ಮಾಡಿ, ಹಣದ ಲೆಕ್ಕಾಚಾರ ಮತ್ತು ಸರಿಯಾದ ಮಾಹಿತಿ ಸಂಗ್ರಹಕ್ಕಾಗಿ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಸಂಘದ ಹಾಲಿ ಅಧ್ಯಕ್ಷರಾದ ರಾಮಕೃಷ್ಣ ರಾವ್, ದಕ್ಷಿಣ ಕನ್ನಡ ಜಿಲ್ಲಾ ನೋಂದಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ವರ್ಷಕ್ಕೆ 1200-1500 ರಂತೆ ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದು ಹೋಗಿದ್ದರೂ, ಕಳೆದ 18 ವರ್ಷಗಳಲ್ಲಿ 25 ಸಾವಿರ ಮಕ್ಕಳಿಂದ ಸದಸ್ಯತ್ವ ಸಂಗ್ರಹ ಆಗಿದೆ. ಕನಿಷ್ಠ ಏನಿಲ್ಲ ಅಂದ್ರೂ 50 ಲಕ್ಷಕ್ಕಿಂತ ಹೆಚ್ಚು ಶುಲ್ಕ ರೂಪದಲ್ಲೇ ಸಂಗ್ರಹ ಆಗಿದೆ. ಆದರೆ ಅಲ್ಲಿ ಯಾರು ಪದಾಧಿಕಾರಿಗಳಿದ್ದಾರೆ, ಎಷ್ಟು ಮಂದಿ ಹಳೆ ವಿದ್ಯಾರ್ಥಿ ಸದಸ್ಯರಿದ್ದಾರೆ, ಹಣವನ್ನು ಯಾರು ಯಾತಕ್ಕಾಗಿ ಖರ್ಚು ಮಾಡಿದ್ದಾರೆಂಬ ಮಾಹಿತಿ ಇಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅದನ್ನು ಮಾನ್ಯ ಮಾಡುವುದಿಲ್ಲ. 16 ವರ್ಷ ಅಧ್ಯಕ್ಷರಾದವರನ್ನು ಈಗ ಗೌರವಾಧ್ಯಕ್ಷರನ್ನಾಗಿ ಮಾಡಿ ಕೂರಿಸಲಾಗಿದೆ. ಸಂಘದಲ್ಲಿ ಅವರದೇ ಕಾರುಬಾರು ನಡೆಯುತ್ತಿದೆ. ವಿವಿಯಲ್ಲಿ ಇರುವ ಕೆಲವು ಪ್ರಾಧ್ಯಾಪಕರು ಶಾಶ್ವತ ಪದಾಧಿಕಾರಿಗಳಾಗಿದ್ದು ಅವರೂ ಆ ಮನುಷ್ಯನ ಜೊತೆಗಿದ್ದಾರೆ ಎಂದು ರಾಮಕೃಷ್ಣ ರಾವ್ ಆರೋಪಿಸುತ್ತಾರೆ.

ಸಂಘದ ಅಡಿಟ್ ವರದಿ, ಹಣಕಾಸು ಲೆಕ್ಕಪತ್ರದ ಬಗ್ಗೆ ತಿಳಿಯಲು ಸ್ವತಃ ರಾಮಕೃಷ್ಣ ರಾವ್ ಆರ್ಟಿಐ ಅರ್ಜಿಯನ್ನೂ ಮಂಗಳೂರು ವಿವಿಗೆ ಸಲ್ಲಿಸಿದ್ದಾರೆ. ಪದವಿ ಪೂರೈಸಿದ ಬಳಿಕವಷ್ಟೇ ಹಳೆ ವಿದ್ಯಾರ್ಥಿಗಳಾಗೋದು. ಸಂಘಕ್ಕೆ ಸೇರಲು ಇಷ್ಟವಿದ್ದರೆ ಮಾತ್ರ ಶುಲ್ಕ ಕೊಟ್ಟು ಸದಸ್ಯರಾಗಬಹುದು. ಹಾಗಂತ, ಎರಡನೇ ವರ್ಷದಲ್ಲಿ ಇರುವಾಗಲೇ ವಿವಿಯವರು ಕಡ್ಡಾಯ ಸದಸ್ಯತ್ವ ಸ್ವೀಕರಿಸುವುದೇ ಅಕ್ರಮ. ಇದೇ ವೇಳೆ, ಮಂಗಳಾ ಅಲ್ಯುಮ್ನಿ ಅಸೋಸಿಯೇಶನ್ ಅನಧಿಕೃತ ಆಗಿದ್ದರೂ, ಸಂಘಕ್ಕೆ ತರಾತುರಿಯಲ್ಲಿ ಚುನಾವಣೆ ನಡೆಸಲು ಹುನ್ನಾರ ನಡೆದಿದ್ದು, ಇದೇ ಸೆ.19ರಂದು ವಾರ್ಷಿಕ ಸಭೆ ನಡೆಯಲಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟಣೆ ನೀಡಲಾಗಿದೆ. ಇವೆಲ್ಲದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ನೋಂದಣಾಧಿಕಾರಿಗೆ ದೂರು ನೀಡಿದ್ದಾರೆ. ನೋಂದಣಾಧಿಕಾರಿ ಇದರ ಬಗ್ಗೆ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

Mangaluru University has once again come under scrutiny, this time over allegations concerning the functioning of the Mangaluru Alumni Association. The association, established to bring together postgraduate students of the university, has allegedly been functioning without proper renewal for nearly 15 years. The association’s current president, Ramakrishna Rao, has now lodged a complaint with the Dakshina Kannada District Registrar seeking action.