ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜಲಾಲಾ ಹತ್ಯೆ ; ಪ್ಯಾಲೆಸ್ತೀನ್ ಗಡಿಯಲ್ಲಿ ಇಸ್ರೇಲಿ ಪಡೆಗಳಿಂದ ಮಟಾಷ್, ಮುಂದಿನ ಟಾರ್ಗೆಟ್ ಅಲ್ ಹಯ್ಯಾ ಎಂದು ಘೋಷಣೆ

11-10-26 10:28 pm       HK News Desk   ದೇಶ - ವಿದೇಶ

ಇಸ್ರೇಲ್ ಸೇನೆ ಮತ್ತು ಗುಪ್ತಚರ ಪಡೆ ಶಿನ್ ಬೆಟ್ ಜಂಟಿ ಕಾರ್ಯಾಚರಣೆಯಲ್ಲಿ 2023ರ ಅಕ್ಟೋಬರ್ 7ರಂದು ಇಸ್ರೇಲಿ ನಾಗರಿಕರನ್ನು ಗುರಿಯಾಗಿಸಿ ನಡೆಸಿದ ದಾಳಿ ಕೃತ್ಯದಲ್ಲಿ ಭಾಗಿಯಾಗಿದ್ದ ಹಮಾಸ್ ಉಗ್ರ ಕಮಾಂಡರ್ ಹಿಶಾಮ್ ಜಮಾಲ್ ಮುಹಮ್ಮದ್ ಅಬು ಜಲಾಲಾ ಎಂಬಾತನನ್ನು ಹತ್ಯೆ ಮಾಡಲಾಗಿದೆ.

ಟೆಲ್ ಅವೀವ್, ಅ.11: ಇಸ್ರೇಲ್ ಸೇನೆ ಮತ್ತು ಗುಪ್ತಚರ ಪಡೆ ಶಿನ್ ಬೆಟ್ ಜಂಟಿ ಕಾರ್ಯಾಚರಣೆಯಲ್ಲಿ 2023ರ ಅಕ್ಟೋಬರ್ 7ರಂದು ಇಸ್ರೇಲಿ ನಾಗರಿಕರನ್ನು ಗುರಿಯಾಗಿಸಿ ನಡೆಸಿದ ದಾಳಿ ಕೃತ್ಯದಲ್ಲಿ ಭಾಗಿಯಾಗಿದ್ದ ಹಮಾಸ್ ಉಗ್ರ ಕಮಾಂಡರ್ ಹಿಶಾಮ್ ಜಮಾಲ್ ಮುಹಮ್ಮದ್ ಅಬು ಜಲಾಲಾ ಎಂಬಾತನನ್ನು ಹತ್ಯೆ ಮಾಡಲಾಗಿದೆ. 

ಪ್ಯಾಲೆಸ್ತೀನ್ ಗಡಿಭಾಗ ಖಾನ್ ಯೂನಿಸ್ ಪ್ರದೇಶದಲ್ಲಿ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ ಈ ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಏಜೆನ್ಸಿಗಳು ಅಧಿಕೃತವಾಗಿ ತಿಳಿಸಿವೆ.

ಅಬು ಜಲಾಲಾ ಹಮಾಸ್‌ನ ಸಶಸ್ತ್ರ ಘಟಕದ ಸೆಕ್ಷನ್ ಕಮಾಂಡರ್ ಆಗಿದ್ದ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲಿನ ಕಿಸುಫಿಮ್ ಮಿಲಿಟರಿ ಪೋಸ್ಟ್ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವು ಇಸ್ರೇಲಿ ಪ್ರಜೆಗಳು ಸಾವನ್ನಪ್ಪಿದ್ದು ಹಲವರನ್ನು ಅಪಹರಿಸಿ ಒತ್ತೆಯಾಳಾಗಿಸಲಾಗಿತ್ತು‌. ಇದರ ಪರಿಣಾಮ ಪ್ಯಾಲೆಸ್ತೀನ್ ಮತ್ತು ಗಾಜಾ ಪಟ್ಟಿ ಮೇಲೆ ಇಸ್ರೇಲಿ ಪಡೆಗಳು ಮುಗಿಬಿದ್ದು ಅಲ್ಲಿ ನೆಲೆಸಿದ್ದ ಉಗ್ರರನ್ನು ಕೊಂದು ಹಾಕಿದ್ದವು. ಅ.7ರ ದಾಳಿಯ ಸಂಚು ಹೆಣೆದವರಲ್ಲಿ ಅಬು ಜಲಾಲಾ ಒಬ್ಬನಾಗಿದ್ದ. ಹೀಗಾಗಿ ಅಂದಿನಿಂದಲೇ ಇಸ್ರೇಲಿ ಪಡೆಗಳು ಹಮಾಸ್ ಕಮಾಂಡರ್ ಗಳನ್ನು ಕೊಲ್ಲಲು ಪ್ಲಾನ್ ಹಾಕಿದ್ದವು. 

ಕದನ ವಿರಾಮ ಬಳಿಕ ಇಸ್ರೇಲ್ ಯುದ್ಧ ನಿಲ್ಲಿಸಿದ್ದರೂ ರಕ್ಷಣಾ ಪಡೆಗಳ (IDF) ಮೇಲೆ ಮತ್ತು ನಾಗರಿಕರ ಮೇಲೆ ದಾಳಿ ನಡೆಸಲು ಅಬು ಜಲಾಲಾ ನಿರಂತರವಾಗಿ ಸಂಚು ರೂಪಿಸುತ್ತಿದ್ದ ಹಾಗೂ ಹಮಾಸ್‌ ಮಿಲಿಟರಿ ಸಾಮರ್ಥ್ಯವನ್ನು ಮರು ಸ್ಥಾಪಿಸಲು ಯತ್ನಿಸುತ್ತಿದ್ದ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ. 

ಇದೇ ವೇಳೆ, ಇಸ್ರೇಲ್ ರಕ್ಷಣಾ ಮಂತ್ರಿ ಕಟ್ಝ್ ಮುಂದಿನ ಟಾರ್ಗೆಟ್ ಹಮಾಸ್ ನಾಯಕ ಖಲೀಲ್ ಅಲ್ ಹಯ್ಯಾ ಎಂದು ಹೇಳಿದ್ದಾರೆ. ಹಮಾಸ್ ನಾಯಕರನ್ನು ಮುಗಿಸುತ್ತೇವೆ, ಅಲ್ ಹಯ್ಯಾ ದಿನ ಶೀಘ್ರದಲ್ಲೇ ಬರಲಿದೆ. ಆದಷ್ಟು ಬೇಗ ನರಕಕ್ಕೆ ತಳ್ಳುತ್ತೇವೆ ಎಂದು ಗುಡುಗಿದ್ದಾರೆ.‌