ಮಂಗಳೂರು ವಿವಿಯಲ್ಲಿ ನ.17ರಿಂದ ಮಕ್ಕಳ ಚಲನಚಿತ್ರೋತ್ಸವ ; ಕನ್ನಡ, ತುಳು, ತಮಿಳು, ಮಲಯಾಳಂ, ಇಂಗ್ಲಿಷ್ ಚಿತ್ರಗಳ ಪ್ರದರ್ಶನ - ಸಂವಾದ

16-11-26 06:21 pm       HK News Staffer   ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ, ಎಸ್.ವಿ.ಪಿ. ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲೀಷ್ ವಿಭಾಗದ ಸಹಯೋಗದೊಂದಿಗೆ ಮಕ್ಕಳ ಚಲನಚಿತ್ರೋತ್ಸವವು ನವೆಂಬರ್ 17ರಿಂದ 21ರ ವರೆಗೆ ಕೊಣಾಜೆಯ ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ಉಳ್ಳಾಲ, ನ.16: ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ, ಎಸ್.ವಿ.ಪಿ. ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲೀಷ್ ವಿಭಾಗದ ಸಹಯೋಗದೊಂದಿಗೆ ಮಕ್ಕಳ ಚಲನಚಿತ್ರೋತ್ಸವವು ನವೆಂಬರ್ 17ರಿಂದ 21ರ ವರೆಗೆ ಕೊಣಾಜೆಯ ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದೆ.

ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ. ನವೆಂಬರ್ 17ರಂದು ನಡೆಯಲಿರುವ ಚಲನಚಿತ್ರೋತ್ಸವದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕ  ಟಿ.ಎಸ್.ನಾಗಾಭರಣ ಅವರು ನೆರವೇರಿಸಲಿದ್ದಾರೆ. ಉದ್ಘಾಟನೆ ಬಳಿಕ ಟಿ.ಎಸ್ ನಾಗಾಭರಣ ಅವರ ಜೊತೆಗೆ ಮುಕ್ತ ಸಂವಾದ ನಡೆಯಲಿದೆ. ಮಧ್ಯಾಹ್ನ ಅವರು ನಿರ್ದೇಶಿಸಿರುವ ಮಕ್ಕಳ ಜನಪ್ರಿಯ ಚಲನಚಿತ್ರ 'ಚಿನ್ನಾರಿ ಮುತ್ತ' ಪ್ರದರ್ಶನಗೊಳ್ಳಲಿದೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಪ್ರತಿದಿನ ವಿವಿಧ ಭಾರತೀಯ ಭಾಷೆಗಳ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಗಳ ಕಥನಗಳನ್ನು ಪರಿಚಯಿಸುವುದರ ಜೊತೆಗೆ ಸಿನಿಮಾ ಮಾಧ್ಯಮದ ಮೂಲಕ ಕಲಿಕೆ, ಚಿಂತನೆ ಮತ್ತು ಸಾಂಸ್ಕೃತಿಕ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ನವೆಂಬರ್ 18ರಂದು ತುಳು ಚಲನಚಿತ್ರ 'ಕೋಟಿ ಚೆನ್ನಯ' ಪ್ರದರ್ಶನಗೊಳ್ಳಲಿದ್ದು, ಹಿರಿಯ ನಾಟಕಕಾರ ತಮ್ಮ ಲಕ್ಷ್ಮಣ ಅವರು ಚಿತ್ರದ ಕುರಿತು ಮಾತನಾಡಲಿದ್ದಾರೆ. ನವೆಂಬರ್ 19ರಂದು ತಮಿಳು ಚಲನಚಿತ್ರ 'ಕಾಕಾ ಮುಟ್ಟೈ' ಪ್ರದರ್ಶನಗೊಳ್ಳಲಿದ್ದು, ಲೇಖಕ ಹಾಗೂ ಚಲನಚಿತ್ರ ವಿಮರ್ಶಕ ಸಂವರ್ಥ ಸಾಹಿಲ್ ಅವರು ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ನವೆಂಬರ್ 20ರಂದು ಇಂಗ್ಲಿಷ್ ಚಲನಚಿತ್ರ 'ಡೆಡ್ ಪೊಯೆಟ್ಸ್ ಸೊಸೈಟಿ' ಪ್ರದರ್ಶನಗೊಳ್ಳಲಿದ್ದು, ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಝೈಬುನ್ನಿಸಾ ಅಬ್ದುಲ್ ರಝಾಕ್ ಹಮ್ಮಬ್ಬ ಅವರು ಚಿತ್ರದ ಕುರಿತು ಮಾತನಾಡಲಿದ್ದಾರೆ. ನವೆಂಬರ್ 21ರಂದು ಬೆಳಿಗ್ಗೆ ಮಲಯಾಳಂ ಚಲನಚಿತ್ರ 'ಕುಮ್ಮಟ್ಟಿ' ಪ್ರದರ್ಶನಗೊಳ್ಳಲಿದ್ದು, ನಿಟ್ಟೆಯ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಂಜೂಪ್ ಕೆ.ಪಿ ಅವರು ಚಿತ್ರದ ಕುರಿತು ಮಾತನಾಡಲಿದ್ದಾರೆ. ಅಂದು ಮಧ್ಯಾಹ್ನ ಹಿಂದಿ ಚಲನಚಿತ್ರ 'ಎ ಬಿಲಿಯನ್ ಕಲರ್ ಸ್ಟೋರಿ' ಪ್ರದರ್ಶನಗೊಳ್ಳಲಿದ್ದು, ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ.ವಿಷ್ಣುಮೂರ್ತಿ ಪ್ರಭು ಅವರು ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಐದು ದಿನಗಳ ಚಲನಚಿತ್ರೋತ್ಸವವು ಮಕ್ಕಳಿಗೆ ವಿವಿಧ ಭಾಷೆಗಳ ಚಲನಚಿತ್ರಗಳ ಪರಿಚಯದ ಜೊತೆಗೆ, ಸಿನಿಮಾಗಳ ಮೂಲಕ ಸಮಾಜ, ಸಂಸ್ಕೃತಿ, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶ ಒದಗಿಸಲಿದೆ ಎಂದು ಮಂಗಳೂರು ವಿವಿಯ ಪ್ರಕಟನೆ ತಿಳಿಸಿದೆ.