ಡ್ರಗ್ಸ್ ದಂಧೆಯ ಬಗ್ಗೆ ಹೊಸ ಬಾಂಬ್ ಸಿಡಿಸಿದ ಪ್ರಮೋದ್ ಮುತಾಲಿಕ್.

10-09-20 05:45 pm       Mysore Correspondent   ಲೀಡರ್ಸ್ ರಿಪೋರ್ಟ್

ಮೈಸೂರು ರಾಜಕಾರಣಿಗಳೇ ಡಗ್ಸ್ ಮಾಫಿಯಾದ ರೂವಾರಿಗಳು, ಮೈಸೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಡ್ರಗ್ಸ್ ದೊರೆಯುತ್ತದೆ. ನನ್ನ ಬಳಿ 32 ರಾಜಕಾರಣಿಗಳ ಪಟ್ಟಿ ಇದೆ. ಹೊಸ ಬಾಂಬ್ ಸಿಡಿಸಿದ ಪ್ರಮೋದ್ ಮುತಾಲಿಕ್.

ಮೈಸೂರು, ಸೆಪ್ಟೆಂಬರ್ 10: ಮೈಸೂರು ರಾಜಕಾರಣಿಗಳೇ ಡಗ್ಸ್ ಮಾಫಿಯಾದ ರೂವಾರಿಗಳಾಗಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಡ್ರಗ್ಸ್ ದೊರೆಯುತ್ತದೆ ಎಂದು ಆರೋಪ ಮಾಡಿದರು.

ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಅವರ ಮಕ್ಕಳೇ ಇದರಲ್ಲಿ ಶಾಮೀಲು ಆಗಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದು, ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರುತ್ತಾರೆ. ಬಳಿಕ ಇದೇ ರೀತಿ ಮತ್ತೇ ಡ್ರಗ್ಸ್ ದಂಧೆ ಮಾಡುತ್ತಾರೆ. ಈ ಡ್ರಗ್ಸ್ ಮಾಫಿಯಾ ಬಗ್ಗೆ ಪೊಲೀಸರಿಗೆ ಎಲ್ಲಾ ತಿಳಿದಿದ್ದರೂ, ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ನನ್ನ ಬಳಿ 32 ರಾಜಕಾರಣಿಗಳ ಪಟ್ಟಿ ಇದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. 

ಲವ್ ಜಿಹಾದ್ ಮಾದರಿಯಲ್ಲಿ ಡ್ರಗ್ಸ್ ಜಿಹಾದ್ ನಡೆಯುತ್ತಿದ್ದು, ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ ಆಗಿದ್ದು, ಪಂಜಾಬ್, ಗುಜರಾತ್‌, ಗೋವಾ ಮೂಲಕ ಭಾರತಕ್ಕೆ ಡ್ರಗ್ಸ್ ಪ್ರವೇಶಿಸುತ್ತಿದೆ ಎಂದು ಹೇಳಿದರು.

ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ‌ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೇ, ಇಂದು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.

Join our WhatsApp group for latest news updates