ಕಾಂಗ್ರೆಸ್ ಕಾಲದಲ್ಲಿ 11 ಬಾರಿ ಎಸ್ಐಆರ್ ಲೀಗಲ್, ಈಗ ಮಾತ್ರ ಇಲ್ಲೀಗಲ್ ! ಇಡೀ ಜಗತ್ತಿನಲ್ಲಿ 7-8 ಶೇ. ಜಿಡಿಪಿ ಇರೋದು ಭಾರತಕ್ಕೆ ಮಾತ್ರ.. ಮಂಗಳೂರಿನಲ್ಲಿ ತೇಜಸ್ವಿ ಸೂರ್ಯ

06-11-26 09:35 pm       HK News Desk   ಕರಾವಳಿ

ನೇಪಾಳ, ಬಾಂಗ್ಲಾದಲ್ಲಿ ಆದ ರೀತಿಯಲ್ಲೇ ಸರ್ಕಾರ ಬದಲಿಸ್ತೀವಿ ಎಂದು ಹೇಳಿ ಕಳೆದ ಎರಡು ವರ್ಷದಿಂದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.

ಮಂಗಳೂರು, ನ.6: ನೇಪಾಳ, ಬಾಂಗ್ಲಾದಲ್ಲಿ ಆದ ರೀತಿಯಲ್ಲೇ ಸರ್ಕಾರ ಬದಲಿಸ್ತೀವಿ ಎಂದು ಹೇಳಿ ಕಳೆದ ಎರಡು ವರ್ಷದಿಂದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇವಿಎಂ ಹ್ಯಾಕ್, ನೈಜ ಮತದಾರರನ್ನು ಡಿಲೀಟ್ ಮಾಡಿಸಿ ಮೋದಿ ಗೆಲ್ಲುತ್ತಿದ್ದಾರೆಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಆದರೆ ಇವಿಎಂ ಆದಬಳಿಕವೇ ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ನೀವು ಗೆದ್ದಿಲ್ಲವೇ ಎಂದು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಮಂಗಳೂರು ವಿಭಾಗದ ವತಿಯಿಂದ ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ ಎನ್ನುವ ಘೋಷಣೆಯಡಿ ನಡೆದ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಅವರು ಮಾತನಾಡಿದರು. ಮುಖ್ಯ ಚುನಾವಣಾ ಆಯುಕ್ತರ ಚಿತಾವಣೆಯಿಂದಲೇ ಮೋದಿ ಗೆಲುವಾಗಿದೆ ಅನ್ಕೊಂಡವರು 2014, 2018 ಮತ್ತು 2024ರಲ್ಲಿ ಚುನಾವಣೆ ಆದಾಗ ಜ್ಞಾನೇಶ್ ಕುಮಾರ್ ಇರಲಿಲ್ಲ. ಈ ಹಿಂದೆ ಕಾಂಗ್ರೆಸ್ ಕಾಲದಲ್ಲಿಯೇ 11 ಬಾರಿ ಎಸ್ಐಆರ್ ಆಗಿದ್ದು ಈ ಬಾರಿಯೂ ಅದೇ ನಿಯಮದಡಿ ಮತಪಟ್ಟಿ ಪರಿಷ್ಕರಣೆ ಆಗುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಅಪಪ್ರಚಾರ ಮಾಡುತ್ತಿದ್ದು ಜನರನ್ನು ದಂಗೆ ಎಬ್ಬಿಸಲು ಪ್ರೇರಣೆ ನೀಡುತ್ತಿದೆ.

ನಿಮ್ಮ ಕಾಲದಲ್ಲಿ ಆಗಿದ್ದ ಮತಪಟ್ಟಿ ಪರಿಷ್ಕರಣೆ ಲೀಗಲ್, ಈಗ ಮಾತ್ರ ಕಾನೂನು ವಿರೋಧಿ ಎನ್ನುವ ರೀತಿ ಗುಲ್ಲೆಬ್ಬಿಸುತ್ತಿದ್ದಾರೆ. ಆದರೆ ಈ ರೀತಿಯ ಕೂಗಿಗೆ ದೇಶದ ಜನರು ಕಿವಿಗೊಡಲ್ಲ ಎಂದು ಹೇಳಿದ ತೇಜಸ್ವಿ ಸೂರ್ಯ, ಇಡೀ ಜಗತ್ತಿನಲ್ಲಿ ಯುದ್ಧ, ಆರ್ಥಿಕತೆ ಕುಸಿತದ ಕಾರಣ ತಲ್ಲಣ ಸೃಷ್ಟಿಯಾಗಿದ್ದರೆ ಭಾರತದಲ್ಲಿ ಮಾತ್ರ ಜಿಡಿಪಿ ವೇಗ 7-8 ಶೇಕಡಾ ವೇಗದಲ್ಲಿ ಸಾಗುತ್ತಿದೆ. ಇದಕ್ಕೆ ಮೋದಿಯವರ ಆರ್ಥಿಕ ನೀತಿಗಳು ಕಾರಣ. ಜಿಡಿಪಿ ಇಷ್ಟು ವೇಗದಲ್ಲಿ ಸಾಗುತ್ತಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ ಎಂದರು.

ಇವಿಎಂ, ಎಸ್ಐಆರ್ ನಿಂದಲೇ ಗೆದ್ದಿದ್ದು ಅಂದರೆ ಕಾಂಗ್ರೆಸ್ ಯಾಕೆ ಕಳೆದ 40 ವರ್ಷದಲ್ಲಿ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಗೆದ್ದಿಲ್ಲ. ದೇಶದಲ್ಲಿ ಒಳ್ಳೆಯ ಆಡಳಿತ ನೀಡುತ್ತಿರುವುದಕ್ಕೆ ಜನರು ಮತ ಕೊಟ್ಟು ಗೆಲ್ಲಿಸುತ್ತಿದ್ದಾರೆ ಎನ್ನುವುದನ್ನು ಕಾಂಗ್ರೆಸಿಗರಿಗೆ ಅರಗಿಸಲು ಆಗುತ್ತಿಲ್ಲ. ಇದಕ್ಕಾಗಿ ಸುಳ್ಳುಗಳನ್ನು ಬಿತ್ತಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ತೇಜಸ್ವಿ ಹೇಳಿದರು. ಕಾಂಗ್ರೆಸ್ ಈಗ ನಕಲಿ ಪಾರ್ಲಿಮೆಂಟ್ ಮಾಡುತ್ತಿದ್ದು ದೇಶವನ್ನು ಅಣಕವಾಡುತ್ತಿದೆ. ಆದರೆ ಸೋನಿಯಾ ಗಾಂಧಿ ಖುಷಿ ಪಡಿಸಲು ಮಾಡುತ್ತಿರುವ ಈ ಅಣಕದಲ್ಲೂ ರಾಹುಲ್ ಗಾಂಧಿಯನ್ನು ಪಿಎಂ ಆಗಿ ತೋರಿಸಿಲ್ಲ ಎಂದು ತೇಜಸ್ವಿ ಅಣಕಿಸಿದರು.

ರಾಹುಲ್ ಗಾಂಧಿ, ಮೋದಿಯವರನ್ನು ಡಿಬೇಟಿಗೆ ಕರೆದಿದ್ದಾರೆ, ತಾಕತ್ತಿದ್ದರೆ ಸಂಸತ್ತಿನಲ್ಲೇ ಚರ್ಚೆ ಮಾಡಿ. ಇವರಿಗೆ ಮಂಗಳೂರಿನ ಯುವಮೋರ್ಚಾ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡುವ ಯೋಗ್ಯತೆ ಇಲ್ಲ ಎಂದರು. ತಲಪಾಡಿಯ ಕೆಸಿ ರೋಡ್ ನಿವಾಸಿ ಸತ್ಯಮೂರ್ತಿ ಎಂಬವರು ತನ್ನ ಕುಟುಂಬದ ಮತಪಟ್ಟಿಯ ಲಿಸ್ಟ್ ನಲ್ಲಿ ಐದು ಜನ ಮುಸ್ಲಿಮರ ಹೆಸರನ್ನು ಸೇರಿಸಿದ್ದಕ್ಕೆ ಪ್ರಶ್ನಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ, ಸಚಿವ ಯುಟಿ ಖಾದರ್ ಕ್ಷೇತ್ರದಲ್ಲಿ ಇದನ್ನು ಉದ್ದೇಶಪೂರ್ವಕ ಮಾಡಿದ್ದಾರೆಯೇ ಎಂದು ಸಿಎಂ ಡಿಕೆಶಿ ಉತ್ತರ ಕೊಡಲಿ ಎಂದು ಸವಾಲೆಸೆದರು.

ಮೋದಿ ನಿಮ್ಮನ್ನು ಸಮುದ್ರಕ್ಕೆ ಎಸೆಯುತ್ತಾರೆ..

ಮಲಯಾಳಂ ಚಿತ್ರನಟ, ಕೇಂದ್ರ ಸಚಿವ ಸುರೇಶ್ ಗೋಪಿ ಮಾತನಾಡಿ, ಮಾತೆರೆಗ್ಲಾ ನಮಸ್ಕಾರ, ಎಂಚ ಉಲ್ಲರ್ ಎನ್ನುತ್ತ ತುಳು ಪದಗಳೊಂದಿಗೆ ಭಾಷಣ ಆರಂಭಿಸಿ ಇಂಗ್ಲಿಷ್, ಹಿಂದಿ, ತಮಿಳಿನಲ್ಲಿ ಮಾತನಾಡಿದರು. ಕವಿ ಸುಬ್ರಹ್ಮಣ್ಯ ಭಾರತಿ ಅವರ ತಮಿಳು ಕವನ ಹೇಳುತ್ತ 30 ಕೋಟಿ ಜನರಿರುವಾಗಲೇ ದೇಶದ ಜನರನ್ನು ಒಟ್ಟುಗೂಡಿಸಲು ಕವಿ ಬರೆದಿದ್ದರು ಎನ್ನುತ್ತ, ಸಂವಿಧಾನ, ದೇಶದ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ ಯುವಜನರನ್ನು ತಪ್ಪು ದಾರಿಗೆ ಎಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಆದರೆ ಈ ಕರೆಗೆ ದೇಶದ ಜನರು ಓಗೊಡುತ್ತಿಲ್ಲ. ಮೋದಿಯವರು ತೊಲಗಬೇಕು ಎಂದು ಖರ್ಗೆಯವರು ಹೇಳುತ್ತಾರೆ, ಆದರೆ ನಾವು ಹೇಳುತ್ತೇವೆ. ಮೋದಿ ಎಲ್ಲಿಗೂ ಹೋಗಲ್ಲ. ನಿಮ್ಮನ್ನು ಮುಂದಿನ ಚುನಾವಣೆಯಲ್ಲಿ ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರ ,ಗೌರವ್ ಭಾಟಿಯಾ ಮಾತನಾಡಿದರು. ಸಂಸದ ಬ್ರಿಜೇಶ್ ಚೌಟ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕ, ಸಂಸದರು ಉಪಸ್ಥಿತರಿದ್ದರು. ಕ್ಲಾಕ್ ಟವರ್ ನಿಂದ ತೊಡಗಿ ಮಂಗಳೂರು ನಗರದಲ್ಲಿ ಪಾದಯಾತ್ರೆ ಬಂದು ಕದ್ರಿ ಮೈದಾನದಲ್ಲಿ ಸಮಾವೇಶ ಸೇರಿದರು.