ಬ್ರಹ್ಮರಕೂಟ್ಲು ಟೋಲ್ ಕೇಂದ್ರಕ್ಕೆ ಎಸ್ಡಿಪಿಐ ಮುತ್ತಿಗೆ ; ಕ್ಯಾಮೆರಾ ಕಿತ್ತಾಕಿ ಕಾರ್ಯಕರ್ತರ ದಾಂಧಲೆ, ಹಲವರು ಬಂಟ್ವಾಳ ಪೊಲೀಸರ ವಶಕ್ಕೆ

26-11-26 03:03 pm       HK News Staffer   ಕರಾವಳಿ

ರಾಷ್ಟ್ರೀಯ ಹೆದ್ದಾರಿ ತುಂಬೆ ಬಳಿಯ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಎಸ್ ಡಿಪಿಐ ಕಾರ್ಯಕರ್ತರು ದಾಂಧಲೆ ನಡೆಸಿದ್ದು ಬಲವಂತವಾಗಿ ಟೋಲ್ ಗೇಟನ್ನು ಮುರಿದು ಹಾಕಿ ವಾಹನಗಳನ್ನು ಸಾಗಲು ಬಿಟ್ಟಿದ್ದಾರೆ.‌

ಮಂಗಳೂರು, ನ.26: ರಾಷ್ಟ್ರೀಯ ಹೆದ್ದಾರಿ ತುಂಬೆ ಬಳಿಯ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಎಸ್ ಡಿಪಿಐ ಕಾರ್ಯಕರ್ತರು ದಾಂಧಲೆ ನಡೆಸಿದ್ದು ಬಲವಂತವಾಗಿ ಟೋಲ್ ಗೇಟನ್ನು ಮುರಿದು ಹಾಕಿ ವಾಹನಗಳನ್ನು ಸಾಗಲು ಬಿಟ್ಟಿದ್ದಾರೆ.‌

ಟೋಲ್ ತೆರವು ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಏಕಾಏಕಿ ಟೋಲ್ ಕೇಂದ್ರಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಟೋಲ್ ಕ್ಯಾಮೆರಾ ಕಿತ್ತು ಹಾಕಿ ಅಲ್ಲಿರುವ ಸಿಬ್ಬಂದಿಗಳಿಗೆ ಧಮಕಿ ಹಾಕಿದ್ದಾರೆ. ಗೇಟ್ ಗಳನ್ನು ಕಿತ್ತಾಕಿ  ಟೋಲ್ ಸಂಗ್ರಹ ಮಾಡದೆ ವಾಹನಗಳನ್ನು ನೇರವಾಗಿ ಹೋಗಲು ಬಿಡುವಂತೆ ಒತ್ತಡ ಹೇರಿದ್ದಾರೆ. 

ಉಪ್ಪಿನಂಗಡಿ ಬಳಿಯ ಬೆಳಾಲಿನಲ್ಲಿ ಹೊಸ ಟೋಲ್ ಕೇಂದ್ರ ಆರಂಭಿಸಲಾಗಿದ್ದು ಅಲ್ಲಿನ ಟೋಲ್ ಪ್ಲಾಜಾ ಆರಂಭದ ಬಳಿಕ ಇಲ್ಲಿ ಮುಚ್ಚಿಸಲಾಗುವುದೆಂದು ಹೇಳಲಾಗಿತ್ತು. ಆದರೆ, ಇಲ್ಲಿ ಬಂದ್ ಮಾಡದೇ ಇರುವುದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಬಿ.ಸಿ.ರೋಡ್ ಟೋಲ್ ಗೆ ಮುತ್ತಿಗೆ ಹಾಕಿದ್ದಾರೆ. 

ಸ್ಥಳಕ್ಕೆ ಬಂಟ್ವಾಳ ಪೊಲೀಸರು ಆಗಮಿಸಿದ್ದು ಟೋಲ್ ಕೇಂದ್ರಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಬಂಟ್ವಾಳ ಠಾಣೆಗೆ ಕರೆದೊಯ್ದಿದ್ದಾರೆ.