ಸಂಡೂರು ರಕ್ಷಿತಾರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ; ಕೇಂದ್ರ ಸಚಿವರಾಗುತ್ತಿದ್ದಂತೆ ಆರು ವರ್ಷಗಳ ಹಿಂದಿನ ಮಾತು ತಪ್ಪಿದ ಎಚ್ಡಿಕೆ, ರೆಡ್ಡಿ ಸಾಮ್ರಾಜ್ಯ ಕಟ್ಟಲು ಮತ್ತೆ ಅವಕಾಶ ? 

16-06-24 08:13 pm       Bangalore Correspondent   ಕರ್ನಾಟಕ

ಎಚ್.ಡಿ. ಕುಮಾರಸ್ವಾಮಿ ಅವರು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಯದ ಸಚಿವರಾಗಿ ಅಧಿಕಾರ ಪಡೆಯುತ್ತಿದ್ದಂತೆಯೇ, ಬಳ್ಳಾರಿಯ ಸಂಡೂರು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ.

ಬೆಂಗಳೂರು, ಜೂನ್ 16: ಎಚ್.ಡಿ. ಕುಮಾರಸ್ವಾಮಿ ಅವರು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಯದ ಸಚಿವರಾಗಿ ಅಧಿಕಾರ ಪಡೆಯುತ್ತಿದ್ದಂತೆಯೇ, ಬಳ್ಳಾರಿಯ ಸಂಡೂರು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ.

ಮಂತ್ರಿಯಾದ ಕೂಡಲೇ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಉಕ್ಕು ಗಣಿಗಾರಿಕೆ ನಡೆಸುವ ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ, ಆರು ವರ್ಷಗಳ ಹಿಂದೆ ತಾವೇ ಆಡಿದ್ದ ಮಾತನ್ನು ಮುರಿದಿದ್ದು, ಪರೋಕ್ಷವಾಗಿ ಅರಣ್ಯ ನಾಶಕ್ಕೆ ಅವಕಾಶ ನೀಡಿದ್ದಾರೆ. ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಪರಿಸರವಾದಿಗಳ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

ದೇವದಾರಿ ಅರಣ್ಯ ಪ್ರದೇಶದಲ್ಲಿ ಐತಿಹಾಸಿಕ ಕುಮಾರಸ್ವಾಮಿ ದೇವಾಲಯವಿದೆ. ಸುತ್ತಲಲ್ಲಿ ದಟ್ಟ ಅರಣ್ಯವನ್ನು ಹೊಂದಿದೆ. ದೇಗುಲದ ಸುತ್ತಲಿನ 2.5 ಎಕರೆ ಪ್ರದೇಶವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ದೇವಸ್ಥಾನವನ್ನು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇಲ್ಲಿ, ಗಣಿಗಾರಿಕೆ ನಡೆಸಬಾರದು ಎಂಬ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಗಣಿಗಾರಿಕೆಯ ವಿಚಾರ ಪ್ರಸ್ತಾಪ ಬಂದಾಗಲೆಲ್ಲ ಸ್ಥಳೀಯರು, ಪರಿಸರವಾದಿಗಳು ಹಾಗೂ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. 

2018ರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಸಂಡೂರಿಗೆ ಬಂದಿದ್ದ ಕುಮಾರಸ್ವಾಮಿ ಅವರನ್ನು ಹೋರಾಟಗಾರ ಎಸ್‌.ಆರ್‌ ಹಿರೇಮಠ್ ನೇತೃತ್ವದ ಜನಸಂಗ್ರಾಮ ಪರಿಷತ್ ಕಾರ್ಯಕರ್ತರು ಭೇಟಿ ಮಾಡಿ, ‘ದೇವದಾರಿ ಪ್ರದೇಶದ ಕುಮಾರಸ್ವಾಮಿ ದೇವಾಲಯದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು’ ಎಂದು ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ್ದ ಕುಮಾರಸ್ವಾಮಿ, ‘ದೇವಾಲಯದ ಸುತ್ತಲಿನ 2-3 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಎಂದಿಗೂ ಅವಕಾಶ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಷೇಧಿಸುತ್ತೇವೆ. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. 

ಇದೀಗ ಕೇಂದ್ರ ಸಚಿವರಾದ ಬೆನ್ನಲ್ಲೇ ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ಸಮ್ಮತಿ ನೀಡಿದ್ದು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್‌’ಗೆ (ಕೆಐಒಸಿಎಲ್‌) ದೇವದಾರಿ ಪ್ರದೇಶದ 388 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಮಂಜೂರು ಮಾಡಿ, ಕಡತಕ್ಕೆ ಸಹಿ ಹಾಕಿದ್ದಾರೆ. ದೇವದಾರಿ ಪ್ರದೇಶದಲ್ಲಿ ಮುಂದಿನ 50 ವರ್ಷಗಳಲ್ಲಿ 3 ಲಕ್ಷ ಟನ್‌ ಕಬ್ಬಿಣದ ಅದಿರನ್ನು ತೆಗೆಯಲು ಕೆಐಒಸಿಎಲ್‌ ಯೋಜನೆ ಹಾಕಿದೆ. ಇಲ್ಲಿ ಗಣಿಗಾರಿಕೆ ಆರಂಭಗೊಂಡರೆ, ಬರೋಬ್ಬರಿ 99,330 ಮರಗಳಿಗೆ ಕೊಡಲಿ ಹಾಕಲಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ. ಈ ಬಗ್ಗೆ ಅರಿವಿದ್ದರೂ, ಕುಮಾರಸ್ವಾಮಿ ದೊಡ್ಡ ಕಪ್ಪದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. 

ಈ ಹಿಂದೆ, ಗಣಿ ಸಾಮ್ರಾಜ್ಯವನ್ನೇ ಕಟ್ಟಿದ್ದ ಜನಾರ್ದನ ರೆಡ್ಡಿ ದರ್ಬಾರಿಗೆ 2013ರಲ್ಲಿ ಅಂತ್ಯ ಹಾಕಲಾಗಿತ್ತು. ಕೋರ್ಟ್ ಆದೇಶದಿಂದಾಗಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೂ ಅವಕಾಶ ಇಲ್ಲದಂತಾಗಿದೆ. ಆದರೆ, ಈಗ ಸಂಡೂರಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಮೂಲಕ ರೆಡ್ಡಿಗಳ ಕೋಟೆಯನ್ನು ಮರಳಿ ಕಟ್ಟಿಕೊಡಲು ಎಚ್‌.ಡಿ ಕುಮಾರಸ್ವಾಮಿಯೇ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Newly appointed Union Steel and Heavy Industries Minister H D Kumaraswamy on Wednesday signed the first official file of the Ministry, approving Kudremukh Iron Ore Company Ltd (KIOCL) to operationalise the Devadari Iron Ore Mine.