1 ರಿಂದ 9ನೇ ತರಗತಿ ; ಪರೀಕ್ಷೆ ಇಲ್ಲದೇ ತೇರ್ಗಡೆ

20-04-21 02:48 pm       Headline Karnataka News Network   ಕರ್ನಾಟಕ

ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಪಾಸು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಬೆಂಗಳೂರು, ಏ.20: ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಮಾಡಿದೆ. 1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಪಾಸು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರೀಕ್ಷೆಗಳನ್ನು ನಡೆಸದೇ ವಿಶ್ಲೇಷಣಾ ಮೌಲ್ಯಾಂಕನಧ ಆಧಾರದ ಮೇಲೆ ಪಾಸು ಮಾಡಲು ತೀರ್ಮಾನಿಸಲಾಗಿದೆ.

"1 ರಿಂದ 9ನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಫಲಿತಾಂಶ ಪ್ರಕಟಣೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ತರಗತಿವಾರು ನಿರ್ಧಾರ ಕೈಗೊಂಡಿದೆ" ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

1 ರಿಂದ 5ನೇ ತರಗತಿ ಮತ್ತು 6 ರಿಂದ 9ನೇ ತರಗತಿಗಳವರೆಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಮುಂದಿನ ತರಗತಿಗೆ ಬಡ್ತಿ ನೀಡುವುದು ಮತ್ತು ಅದನ್ನು ಪ್ರಗತಿ ಪತ್ರದಲ್ಲಿ ದಾಖಲಿಸುವುದು ಸೇರಿದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಏಪ್ರಿಲ್ 30ರೊಳಗೆ ನಿರ್ವಹಿಸಿ ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

1 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು/ ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್‍ಲೈನ್ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ ಆ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆಗಳನ್ನಾಧರಿಸಿದ ಕೃತಿ ಸಂಪುಟ/ ಚೈಲ್ಡ್ ಪ್ರೊಫೈಲ್, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ ಈವರೆವಿಗೆ ಪೂರೈಸಿದ ಪಠ್ಯವಸ್ತು/ಸಾಮರ್ಥ್ಯ/ ಕಲಿಕಾ-ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ.

1 ರಿಂದ 5ನೇ ತರಗತಿವರೆಗೆ ಶಾಲಾ ಹಂತದಲ್ಲಿ ಮಕ್ಕಳ ಪ್ರಗತಿ ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುವುದು. ಹಾಗೆಯೇ ಈ ತರಗತಿಗಳ ವಿದ್ಯಾರ್ಥಿಗಳು ಶಾಲೆಗೆ ಭೌತಿಕವಾಗಿ ಹಾಜರಾಗಲು ಇದುವರೆವಿಗೂ ಕೋವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿ ಅವಕಾಶ ಕಲ್ಪಿಸದೇ ಇರುವ ಹಿನ್ನೆಲೆಯಲ್ಲಿ ಈ ಮಕ್ಕಳಿಗೆ ಪ್ರತ್ಯೇಕ ಆನ್‍ಲೈನ್ ಇಲ್ಲವೇ ಆಫ್‍ಲೈನ್ ಮೂಲಕವೂ ಸಹ ಮೌಲ್ಯಾಂಕನ ಮಾಡಬಾರದು. ಮೌಲ್ಯಾಂಕನಕ್ಕಾಗಿ ಈ ಮಕ್ಕಳನ್ನು ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಬಾರದು.

6 ರಿಂದ 9ನೇ ತರಗತಿಗಳ ಮಕ್ಕಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತಿದ್ದರು. ಹಾಗೆಯೇ ದೂರದರ್ಶನ ಚಂದನ ವಾಹಿನಿಯ ಸಂವೇದ, ಇ-ಕಲಿಕಾ, ಆನ್‍ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಪ್ರವಚನ ಆಲಿಸಿರುವ ಹಿನ್ನಲೆಯಲ್ಲಿ ಈ ಮೇಲಿನ ಪಾಠ ಪ್ರವಚನ, ಕಲಿಕಾ ಪೂರಕ ಚಟುವಟಿಕೆ, ಪ್ರಾಜೆಕ್ಟ್ ಚಟುವಟಿಕೆಗಳ ನೆಲೆಯಲ್ಲಿ ಈಗಾಗಲೇ ಕೈಗೊಂಡಿರುವ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸಿದ ದಾಖಲೆಗಳನ್ನಾಧರಿಸಿ ಪಡೆದ ಅಂಕಗಳನ್ನು 100ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತದೆ.

ಮೌಲ್ಯಾಂಕನ ವಿಶ್ಲೇಷಣೆಯ ಅನುಪಾಲನೆ:

ಈ ಮೌಲ್ಯಾಂಕನದ ಉದ್ದೇಶ ವಿದ್ಯಾರ್ಥಿಗಳನ್ನು ಉತ್ತೀರ್ಣ/ಅನುತ್ತೀರ್ಣ ಎಂದು ತೀರ್ಮಾನಿಸುವುದಲ್ಲ. ಬದಲಾಗಿ ಅವರ ಕಲಿಕೆಯ ಪ್ರಗತಿ ಹಾಗೂ ಕೊರತೆಯನ್ನು ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೇತು-ಬಂಧ ಕಾರ್ಯಕ್ರಮವನ್ನು ನಡೆಸಿ ಈ ಕೊರತೆಯನ್ನು ತುಂಬಲು ಕ್ರಮ ವಹಿಸಲು ಶಾಲಾ ಯೋಜನೆಯನ್ನು ತಯಾರಿಸಲಾಗುತ್ತದೆ.

2021-22ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪುನರಾರಂಭವಾದ ನಂತರ ಈ ಮಕ್ಕಳಿಗೆ ಕಳೆದ ಸಾಲಿನಲ್ಲಿ ಹಿಂದಿನ ತರಗತಿಯಲ್ಲಿನ ಕಲಿಕಾ ಸಾಮರ್ಥ್ಯಗಳ ಬಗ್ಗೆ ನೈದಾನಿಕ ಪರೀಕ್ಷೆ ನಡೆಸಿ ಅವರಲ್ಲಿ ಇರುವ ಕಲಿಕಾ ಕೊರತೆಯನ್ನು ಗುರುತಿಸುವುದು. ಈ ಕೊರತೆಗಳು ಹಾಗೂ ಹಿಂದಿನ ವರ್ಷ ಪಟ್ಟಿ ಮಾಡಿ ಇಟ್ಟುಕೊಂಡಿದ್ದ ಕಲಿಕಾ ಕೊರತೆಗಳನ್ನು ಆಧರಿಸಿ ಪ್ರತಿ ಮಗುವಿನವಾರು ನಿರ್ದಿಷ್ಟ ತಂತ್ರಗಳನ್ನು ರೂಪಿಸಿ ಸೇತು-ಬಂಧ ಮುಖೇನ ಪರಿಹಾರ ಬೋಧನೆ ನಡೆಸುವುದು. ನಂತರ ಸಾಫಲ್ಯ ಪರೀಕ್ಷೆ ನಡೆನಸಿ ಮಕ್ಕಳಲ್ಲಿ ಕಲಿಕೆ ಆಗಿರುವುದನ್ನು ದೃಢೀಕರಿಸಿ ಮುಂದಿನ ತರಗತಿಯ ಪಠ್ಯಾಧಾರಿತ ಕಲಿಕಾಂಶಗಳ ಬೋಧನೆಯನ್ನು ಆರಂಭಿಸುವುದು.

The education department has decided that children of Class 1-9 will not be asked to physically attend examinations.