ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್ದೇ ಯು.ಟಿ.ಖಾದರ್ ಸಾಧನೆ, ಎಲ್ಲದಕ್ಕೂ ಮೂಗು ತೂರಿಸುವ ಸ್ಪೀಕರ್ ಖಾದರ್ ಜಿಲ್ಲೆಯ ರಸ್ತೆ ಗುಂಡಿಗಳನ್ನೂ ಮುಚ್ಚಿಸಲಿ ; ಸತೀಶ್ ಕುಂಪಲ ಆಗ್ರಹ 

24-09-25 06:55 pm       Mangalore Correspondent   ಕರಾವಳಿ

ಯು.ಟಿ.ಖಾದರ್ ಅವರು ಜಿಲ್ಲೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಬಳಕೆಯನ್ನ ನಿಲ್ಲಿಸಿದ್ದಾರೆಯೇ ಹೊರತು ಸ್ಪೀಕರ್ ಸ್ಥಾನದ ಜವಾಬ್ದಾರಿ ನಿರ್ವಹಿಸಿಲ್ಲ. ಇಲ್ಲಿನ ಎಲ್ಲಾ ವಿಚಾರಗಳಲ್ಲೂ ಸ್ಪೀಕರ್ ಯು.ಟಿ.ಖಾದರ್ ಅವರೇ ಮೂಗು ತೂರಿಸುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಯಾರೆಂಬುದೇ ಜನರಿಗೆ ಗೊಂದಲವಾಗಿದೆ.

ಉಳ್ಳಾಲ, ಸೆ.24 : ಯು.ಟಿ.ಖಾದರ್ ಅವರು ಜಿಲ್ಲೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಬಳಕೆಯನ್ನ ನಿಲ್ಲಿಸಿದ್ದಾರೆಯೇ ಹೊರತು ಸ್ಪೀಕರ್ ಸ್ಥಾನದ ಜವಾಬ್ದಾರಿ ನಿರ್ವಹಿಸಿಲ್ಲ. ಇಲ್ಲಿನ ಎಲ್ಲಾ ವಿಚಾರಗಳಲ್ಲೂ ಸ್ಪೀಕರ್ ಯು.ಟಿ.ಖಾದರ್ ಅವರೇ ಮೂಗು ತೂರಿಸುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಯಾರೆಂಬುದೇ ಜನರಿಗೆ ಗೊಂದಲವಾಗಿದೆ. ಜಿಲ್ಲೆಯ ರಸ್ತೆಗಳ ದುರವಸ್ಥೆ ಬಗ್ಗೆಯೂ ಖಾದರ್ ಅವರೇ ವಿಶೇಷ ಮುತುವರ್ಜಿ ವಹಿಸಿ ಗುಂಡಿಗಳನ್ನ ಮುಚ್ಚಿಸುವ ಕಾರ್ಯ ನಡೆಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಆಗ್ರಹಿಸಿದರು.

ರಸ್ತೆ ಹೊಂಡಗಳ ವಿರುದ್ಧ ಹಾಗೂ ರಸ್ತೆ ದುರಸ್ತಿಗೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ಕೋಟೆಕಾರು ಬೀರಿಯಲ್ಲಿ ಬುಧವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಗ್ರಹಚಾರ ಹಿಡಿದ ಸರಕಾರ ಆಡಳಿತ ನಡೆಸುತ್ತಿದೆ. ನಾನಾ ರೀತಿಯ ತೆರಿಗೆ ವಸೂಲಿಯ ಮೂಲಕ ಜನಸಾಮಾನ್ಯರ ರಕ್ತ ಹಿಂಡುತ್ತಿರುವ ಯಾವುದೇ ಗ್ಯಾರಂಟಿ ಇಲ್ಲದ ಸರಕಾರ ಇದಾಗಿದೆ. ಕಳೆದ ಐದು ತಿಂಗಳುಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಸಿಗದಂತೆ ಮಾಡಿ ಕಾರ್ಮಿಕರನ್ನ ತೊಂದರೆಗೀಡು ಮಾಡಿರುವ ಸರಕಾರವು ಕೆಂಪು ಕಲ್ಲು ಮತ್ತು ಮರಳು ಸಾಗಾಟದ ನೀತಿಯನ್ನ ಸರಳೀಕರಣಗೊಳಿಸಲು ನಾಳೆ, ನಾಡಿದ್ದೆಂದು ದಿನ ದೂಡುತ್ತಿದೆ ಹೊರತು ಸಮಸ್ಯೆಯನ್ನ ಬಗೆಹರಿಸಿಲ್ಲ. ಸ್ಪೀಕರ್ ಯು.ಟಿ.ಖಾದರ್ ಸಹ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಿಜೆಪಿ ಸರಕಾರ ಇದ್ದಾಗ 3 ಎ ಮುಖಾಂತರ ಕೆಂಪು ಕಲ್ಲು ಸಾಗಾಟದ ಕಾನೂನನ್ನ ಸರಳೀಕರಣ ಮಾಡಲಾಗಿತ್ತು. ಮರಳು ನೀತಿಯನ್ನೂ ಸಹ ಸಡಿಲಗೊಳಿಸಲಾಗಿತ್ತು‌. ಕೆಂಪು ಕಲ್ಲಿಲ್ಲದೆ ಕಟ್ಟಡ ನಿರ್ಮಾಣ ಕಾಮಗಾರಿ ನಿಂತಿರುವ ಪರಿಣಾಮ ಕಾರ್ಮಿಕ ವರ್ಗಕ್ಕೆ ಮಾತ್ರವಲ್ಲದೆ, ಸಣ್ಣ ವ್ಯಾಪಾರಸ್ಥರಿಗೂ ಆರ್ಥಿಕ ಹೊಡೆತ ಬಿದ್ದಿದೆ. 

ಸರಕಾರವು ಜಾತಿಗಣತಿಗೆ ಹೊರಟದ್ದು ಜನಸಾಮಾನ್ಯರಿಗೆ ಸಿಗುವ ಸವಲತ್ತುಗಳನ್ನ ಕಡಿತಗೊಳಿಸಲಿಕ್ಕಾಗಿಯೇ ಹೊರತು ಯಾರನ್ನೂ ಉದ್ಧಾರ ಮಾಡಲಿಕ್ಕಲ್ಲ. ಸ್ಥಳೀಯ ಮಾಡೂರಿನ ರಸ್ತೆ ಸರಿಪಡಿಸಲು‌ ಸರಕಾರದಲ್ಲಿ ಹಣ ಇಲ್ಲದಂತಾಗಿದೆ. ಸಮಸ್ಯೆಯನ್ನ ಸರಿಪಡಿಸಬೇಕಿದ್ದ ಲೋಕೋಪಯೋಗಿ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಪಕ್ಕದ ಕೇರಳದಿಂದ ಆಂಬ್ಯುಲೆನ್ಸಲ್ಲಿ ಬರುವ ರೋಗಿಗಳು ರಸ್ತೆ ಗುಂಡಿಗಳಿಂದಾಗಿ ಆಸ್ಪತ್ರೆಗೆ ಜೀವಂತವಾಗಿ ತಲುಪುವ ಗ್ಯಾರಂಟಿ ಇಲ್ಲದಂತಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರ್, ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ದಿ ಮೈಸೂರು ಇಲೆಕ್ಟ್ರಿಕಲ್ಸ್ ಲಿಮಿಟೆಡ್ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮೋಹನ್ ರಾಜ್ ಕೆ.ಆರ್, ದಯಾನಂದ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.

BJP district president Satish Kumpala has criticized Speaker U.T. Khader, alleging that his only “achievement” so far has been restricting the use of loudspeakers at religious events. Addressing a protest organized by the BJP Mangaluru constituency unit at Kotekar Beeri on Wednesday, Kumpala said that Khader interferes in every matter, creating confusion among people about who the actual in-charge minister of Dakshina Kannada district.