ಬಿಜೆಪಿ ನಾಯಕರ ಮುಂದೆ ಕೈಕಟ್ಟಿ ನಿಂತ ಅಣ್ಣಾಮಲೈ: ಜಾಲತಾಣದಲ್ಲಿ ಫೋಟೊ ವೈರಲ್, ಟೀಕೆ, ಟಿಪ್ಪಣಿ !!

29-01-21 01:10 pm       Bangalore Correspondent   ನ್ಯೂಸ್ View

ಅಣ್ಣಾಮಲೈ ಅವರು ಬಿಜೆಪಿ ನಾಯಕರ ಜೊತೆಗಿರುವ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.

ಬೆಂಗಳೂರು, ಜ.29 : ಕರ್ನಾಟಕದಲ್ಲಿ ದಕ್ಷ ಐಪಿಎಸ್ ಅಧಿಕಾರಿಯೆಂದು ಹೆಸರು ಮಾಡಿ, ದಿಢೀರ್ ರಾಜಿನಾಮೆ ತಮಿಳುನಾಡಿನಲ್ಲಿ ಬಿಜೆಪಿ ಸೇರಿ ಸಂಚಲನ ಮೂಡಿಸಿದ್ದ ಕೆ. ಅಣ್ಣಾಮಲೈ ಅವರು ಬಿಜೆಪಿ ನಾಯಕರ ಜೊತೆಗಿರುವ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ತಮಿಳುನಾಡಿನಲ್ಲಿ ನಡೆದ ಸಭೆಯೊಂದರಲ್ಲಿ ಬಿಜೆಪಿ ನಾಯಕರು ಸುತ್ತಲೂ ಸೋಫಾದಲ್ಲಿ ಕುಳಿತಿದ್ದರೆ, ಎಲ್ಲರ ನಡುವೆ ಅಣ್ಣಾಮಲೈ ಅವರು ಕೈಕಟ್ಟಿ ನಿಂತಿದ್ದ ಫೋಟೊ ಭಾರೀ ವೈರಲ್ ಆಗಿದ್ದಲ್ಲದೆ, ಅಣ್ಣಾಮಲೈ ಸ್ಥಿತಿ ಈ ಪರಿ ಮುಟ್ಟಿದ್ಯಾ ಎನ್ನುವಂತೆ ಪ್ರಶ್ನೆಗಳು ಸುರಿಮಳೆ ಎದುರಾಗಿವೆ. 

ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಹಾಗೂ ಇತರೆ ನಾಯಕರ ನಡುವೆ ಸರಳವಾಗಿ ಪಂಚೆಯುಟ್ಟು ಮೂಲೆಯಲ್ಲಿ ನಿಂತಿರುವ ಅಣ್ಣಾಮಲೈಯವರ ಫೋಟೊ, ತೀವ್ರ ಟೀಕೆ ಹಾಗೂ ವ್ಯಂಗ್ಯಕ್ಕೆ ಗುರಿಯಾಗಿದೆ. ಸಿ.ಟಿ. ರವಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದರು. ಅದನ್ನು ಅಣ್ಣಾಮಲೈ ರೀಟ್ವೀಟ್ ಮಾಡಿದ್ದರು. 

ಆದರೆ, ಈ ಫೋಟೊಗಳನ್ನು ನೋಡಿದ ನೆಟ್ಟಿಗರು ವಾಟ್ಸಪ್ ತಾಣದಲ್ಲಿ ಹರಿಯಬಿಟ್ಟು ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಈ ಬಗ್ಗೆ ಅಣ್ಣಾಮಲೈ ಸ್ವತಃ ವಿವರಣೆ ನೀಡಿದ್ದು 'ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಹೇಳುವಾಗಿನ ನನ್ನ ಸರಳ ನಿಲುವು ಕರ್ನಾಟಕದ ಸ್ನೇಹಿತರ ಮಧ್ಯೆ ಕಿಡಿ ಹೊತ್ತಿಸುತ್ತದೆ ಎಂದು ಕಲ್ಪನೆ ಕೂಡ ಮಾಡಿರಲಿಲ್ಲ. ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕಾರ್ಯಕ್ರಮದಲ್ಲಿ ನಮ್ಮ ಆಹ್ವಾನಿತರಾಗಿ ಹಾಜರಿದ್ದರು' ಎಂದು ಹೇಳಿದ್ದಾರೆ.

ಆದರೆ, ಅಣ್ಣಾಮಲೈ ಅವರ ಫೋಟೊವನ್ನು ಇರಿಸಿಕೊಂಡು ಅನೇಕ ರೀತಿ ಟ್ರೋಲ್ ಮಾಡಲಾಗುತ್ತಿದೆ. ದಕ್ಷ ಹಾಗೂ ಶಿಸ್ತಿನ ಅಧಿಕಾರಿಯಾಗಿದ್ದ ಅವರ ಈಗಿನ ಸ್ಥಿತಿ ಮರುಕ ಹುಟ್ಟಿಸುತ್ತಿದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. 

ಎಲ್ಲವನ್ನೂ ಕಳೆದುಕೊಂಡಿದ್ದಾರೆ 

ಕರ್ನಾಟಕದ ಮಾಜಿ ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಬಹುಶಃ ಅವರ ರಾಜ್ಯದಲ್ಲೂ ಸಿಗದೆ ಇರೋ ಗೌರವ, ಮಾನ್ಯತೆ, ಪ್ರತಿಷ್ಠೆ, ಅಭಿಮಾನಿ ಬಳಗ ಕರ್ನಾಟಕದಲ್ಲಿ ಸಿಕ್ಕಿತು.. ಎಲ್ಲೋ ಒಂದು ಕಡೆ ಅವರು ರಾಜಕೀಯಕ್ಕೆ ಧುಮುಕಿ ಅದೆಲ್ಲವನ್ನೂ ಕಳ್ಕೊಂಡಿದ್ದಾರೆ ಎಂದು ಅಜ್ಜು ಸುಲ್ತಾನ್ ಬರೆದುಕೊಂಡಿದ್ದಾರೆ. 

ಭಂಡ ಬದುಕು ಬೇಕಿತ್ತೇ? 

ಕೆಲಸ ಇಲ್ಲದೆ ಲಕ್ಷಾಂತರ ಪದವೀಧರ ಯುವಕರು ದೇಶದಲ್ಲಿ ದಿನನಿತ್ಯ ಕೊರಗಿ ಕೊರಗಿ ಸಾಯ್ತಿದಾರೆ. ಸಮಾಜದ ಡೊಂಕುಗಳನ್ನು ತಿದ್ದಿ ವ್ಯವಸ್ಥೆಯನ್ನು ಕಾಪಾಡುವ ಉನ್ನತ ಹುದ್ದೆಗಳಲ್ಲಿ IPS ಸಹ ಒಂದು. ಅಂತಹ ಉನ್ನತ ಹುದ್ದೆ ಬಿಟ್ಟು ಇಂತಹ ಮಾಮ ಕೆಲಸ ಮಾಡೋಕೆ ಹೇಗೆ ಮನಸಾಯ್ತೊ ಗೊತ್ತಿಲ್ಲ. ಇಂತಹ ಭಂಡ ಬದುಕು ಬೇಕಿತ್ತೇ.. ಅಷ್ಟೊಂದು ವಿದ್ಯಾವಂತರಾಗಿ ಇಂತಹ ಹೆಬ್ಬೆಟ್ಟುಗಳ ಮುಂದೆ ಕೈ ಕಟ್ಟಿ ನಿಲ್ಲುವ ಸ್ಥಿತಿ ಬರಬಾರದಿತ್ತು ಎಂದು ರೇಖಾ ಶ್ರೀನಿವಾಸ್ ಎಂಬವರು ಅಣಕಿಸಿದ್ದಾರೆ.

Former IPS officer K. Annamalai and vice-president of the Bajap party picture of Standing Folding his hands amidst others sitting has picked up controversy. The picture of this has gone viral on social media.