ಮಂದಿರಕ್ಕೆ ಮುನ್ನುಡಿ, ಮೋದಿಯಿಂದ ಬೆಳ್ಳಿ ಇಟ್ಟಿಗೆ ; ಕೋಟಿ ಕಂಗಳ ಕನಸು ಸಾಕ್ಷಾತ್ಕಾರ !

05-08-20 07:57 am       Headline Karnataka News Network   ದೇಶ - ವಿದೇಶ

ಶಿಲಾನ್ಯಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 22.6 ಕೆಜಿ ತೂಕದ ಐದು ಇಟ್ಟಿಗೆಗಳನ್ನು ಬಳಸಿದರು. ಇವುಗಳಿಗೆ ನಂದಾ, ಭದ್ರಾ, ಜಯಾ, ರಿಕ್ಷಾ, ಪೂರ್ಣಾ ಎಂದು ಹೆಸರು.

ಲಕ್ನೋ, ಆಗಸ್ಟ್ 05: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಭಿಜಿನ್ ಮುಹೂರ್ತ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಭೂಮಿಪೂಜೆ ನೆರವೇರಿತು.

ಶಿಲಾನ್ಯಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 22.6 ಕೆಜಿ ತೂಕದ ಐದು ಇಟ್ಟಿಗೆಗಳನ್ನು ಬಳಸಿದರು. ಇವುಗಳಿಗೆ ನಂದಾ, ಭದ್ರಾ, ಜಯಾ, ರಿಕ್ಷಾ, ಪೂರ್ಣಾ ಎಂದು ಹೆಸರು.

ಋತ್ವಿಜರಿಂದ ವೇದಮಂತ್ರ ಪಠಣ ಮತ್ತು ಭಕ್ತರಿಂದ ರಾಮಾಯಣ ಶ್ಲೋಕಗಳ ಪಠಣ ಸತತವಾಗಿ ನಡೆಯಿತು. ದೇಶದ ವಿವಿಧ ಭಾಗಗಳಲ್ಲಿ ಟಿವಿಗಳಲ್ಲಿ ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸುತ್ತಿದ್ದ ಜನರು ಕುಳಿತ ಸ್ಥಳದಿಂದಲೇ ’ಜೈಶ್ರೀರಾಮ್’ ಎಂದು ಜಯಕಾರ ಮೊಳಗಿಸಿದರು.

ಭೂಮಿಪೂಜೆಗೆ ಬಳಸುವ ಗುದ್ದಲಿಯನ್ನು ವಿಧಿಪೂರ್ವಕ ಪೂಜಿಸಲಾಯಿತು. ಈ ಸಂದರ್ಭ ಭಕ್ತರು ರಾಮರಕ್ಷಾಸ್ತೋತ್ರ ಪಠಿಸಿದರು. ಭೂಮಿಯನ್ನು ಲಕ್ಷ್ಮಿ (ಸಂಪತ್ತು) ಎಂದು ಗೌರವಿಸುವ ಶ್ರೀಸೂಕ್ತವನ್ನು ಋತ್ವಿಜರು ಪಠಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೈಮುಗಿದು ಕುಳಿತಿದ್ದರು.

ಭೂಮಿಯನ್ನು ಲಕ್ಷ್ಮಿ ಎಂದು ಗೌರವಿಸುವ ಶ್ರೀಸೂಕ್ತವನ್ನು ಸ್ವರಬದ್ಧವಾಗಿ ಋತ್ವಿಜರು ಪಠಿಸಿದರು. ಪ್ರಧಾನಿ ಭೂಮಿಗೆ ಆರತಿ ಮಾಡಿ, ನಮಸ್ಕರಿಸಿದರು. ಭೂಮಿಯಿಂದ ಮಣ್ಣು ತೆಗೆದು ಶಿರಕ್ಕೆ ಧರಿಸಿದರು. ಪಂಚಭೂತಗಳೂ ಮಂಗಳ ಉಂಟು ಮಾಡಲಿ ಎಂಬ ಪ್ರಾರ್ಥನೆಯೊಂದಿಗೆ ಋತ್ವಿಜರು ಶಾಂತಿ ಮಂತ್ರ ಪಠಿಸಿದರು.

’ಕಾಲಕ್ಕೆ ಸರಿಯಾಗಿ ಮಳೆ ಬರಲಿ, ಸಸ್ಯ ಸಂಪತ್ತು ವೃದ್ಧಿಯಾಗಲಿ...’ ಋತ್ವಿಜರು ಆಶೀರ್ವಾದ ಮಂತ್ರ ಪಠಿಸಿದರು.