Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ ; ವಿರೋಧ ಬೆನ್ನಲ್ಲೇ ಸರ್ಕಾರ ಯು ಟರ್ನ್, ಸರ್ಕಾರೇತರ ಕಾರ್ಯಕ್ರಮಕ್ಕೆ ಅವಕಾಶ ಇಲ್ಲವೆಂದು ಸಿಎಂ ಕಚೇರಿ ಸ್ಪಷ್ಟನೆ 

01-10-26 10:50 pm       HK News Staffer   ಕರ್ನಾಟಕ

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನವೆಂಬರ್ 9ರಂದು ‘ಉರ್ದು ಹಬ್ಬ’ ಆಚರಣೆ ನಡೆಸಲಾಗುವುದು ಎಂಬ ಸಚಿವ ಯು.ಟಿ.ಖಾದರ್ ಹೇಳಿಕೆಗೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ. 

ಬೆಂಗಳೂರು, ಅ.1: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನವೆಂಬರ್ 9ರಂದು ‘ಉರ್ದು ಹಬ್ಬ’ ಆಚರಣೆ ನಡೆಸಲಾಗುವುದು ಎಂಬ ಸಚಿವ ಯು.ಟಿ.ಖಾದರ್ ಹೇಳಿಕೆಗೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ. 

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಯಾವುದೇ ಸರ್ಕಾರಿಯೇತರ ಅಥವಾ ಖಾಸಗಿ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಉರ್ದು ಹಬ್ಬ ಸೇರಿದಂತೆ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ.

ಸಿಎಂ ಕಚೇರಿಯ ಸ್ಪಷ್ಟೀಕರಣದಿಂದಾಗಿ ಉರ್ದು ಹಬ್ಬದ ಆಯೋಜನೆ ಕುರಿತ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ನವೆಂಬರ್ 9ರಂದು ವಿಧಾನಸೌಧ ಮೆಟ್ಟಿಲುಗಳ ಮೇಲೆ ಉರ್ದು ದಿನಾಚರಣೆ ನಡೆಸುವ ಕುರಿತು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದರು. ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು. 

ಆದರೆ ಕಾರ್ಯಕ್ರಮದ ಸ್ಥಳದ ಕುರಿತು ಬಿಜೆಪಿ ಸೇರಿದಂತೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, ವಿಧಾನಸೌಧದಂತಹ ಪ್ರಮುಖ ಸರ್ಕಾರಿ ವೇದಿಕೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಅಗತ್ಯವೇನು ಎಂದು ಪ್ರಶ್ನಿಸಿದ್ದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಇದೇ ರೀತಿಯ ವೇದಿಕೆ ಹಾಗೂ ಆದ್ಯತೆ ದೊರೆಯುತ್ತಿದೆಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದರು.

ವೈಯಕ್ತಿಕ ಅಭಿಪ್ರಾಯವಾಗಿತ್ತೆಂದ ಖಾದರ್ ;

ವಿರೋಧ ಕೇಳಿಬಂದ ಬೆನ್ನಲ್ಲೇ ಸಚಿವ ಖಾದರ್, ಉರ್ದು ಹಬ್ಬವನ್ನು ವಿಧಾನಸೌಧದ ಮೆಟ್ಟಿಲುಗಳಲ್ಲಿ ನಡೆಸುವುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿತ್ತೇ ಹೊರತು ಸರ್ಕಾರದ ಅಂತಿಮ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲ ಭಾಷೆಗಳಿಗೂ ಗೌರವವಿದ್ದು, ಭಾಷೆಯ ವಿಚಾರವನ್ನು ರಾಜಕೀಯಗೊಳಿಸಬಾರದು ಎಂಬ ನಿಲುವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಉರ್ದು ಹಬ್ಬದ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ಸರ್ಕಾರದ ಸ್ಪಷ್ಟೀಕರಣ ಮಹತ್ತರ ತಿರುವು ನೀಡಿದೆ. ವಿಧಾನಸೌಧದ ಮೆಟ್ಟಿಲುಗಳಲ್ಲಿ ಸರ್ಕಾರಿಯೇತರ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂಬ ಹೇಳಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.

The Karnataka government has clarified that no non-government or private programme has been permitted on the grand steps of Vidhana Soudha, amid controversy over the proposed ‘Urdu Habba’ scheduled for November 9.