ವಿಮಾನ ಯಾನ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ಕೇಳಿದ ಅದಾನಿ ಗ್ರೂಪ್ ; ಹೊಸ ಉದ್ಯಮಿಗಳಿಗೆ ಬಂಡವಾಳ ಹೂಡಲು ಆಸಕ್ತಿ, 60 ಕೋಟಿ ಜನರಿಗೆ ದಿನಕ್ಕೆ 30 ಸಾವಿರ ವಿಮಾನ ಕೊಡಿ!

29-11-26 04:36 pm       HK News Staffer   ದೇಶ - ವಿದೇಶ

ದೇಶದ ಪ್ರಮುಖ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಅದಾನಿ ಗ್ರೂಪ್, ಇದೀಗ ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಅದಾನಿ ಕಂಪನಿ ಕಡೆಯಿಂದ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ.

ಮುಂಬೈ, ನ.29: ದೇಶದ ಪ್ರಮುಖ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಅದಾನಿ ಗ್ರೂಪ್, ಇದೀಗ ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಅದಾನಿ ಕಂಪನಿ ಕಡೆಯಿಂದ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. 

ಮುಂಬೈನಲ್ಲಿ ನಡೆದ 'ಇಂಡಿಯಾ ಡೆಟ್ ಕ್ಯಾಪಿಟಲ್ ಮಾರ್ಕೆಟ್ ಸಮ್ಮಿಟ್' ಕಾರ್ಯಕ್ರಮದಲ್ಲಿ ಮಾತನಾಡಿದ ಅದಾನಿ ಗ್ರೂಪ್‌ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ರಾಬಿ ಸಿಂಗ್, ಭಾರತದ ವೈಮಾನಿಕ ಕ್ಷೇತ್ರದ ವಿಸ್ತರಣೆಗೆ ಇರುವ ಅಪಾರ ಅವಕಾಶಗಳನ್ನು ತೆರೆದಿಟ್ಟರು. ಸ್ವತಃ ವಿಮಾನಯಾನ ಸಂಸ್ಥೆಯನ್ನು ಆರಂಭಿಸುವ ಬದಲು, ಈಗಿರುವ ಏರ್‌ಲೈನ್‌ಗಳಲ್ಲಿ ಹೂಡಿಕೆ ಮಾಡುವ ಅಥವಾ ಹೊಸದಾಗಿ ಈ ಕ್ಷೇತ್ರಕ್ಕೆ ಬರುವ ಉದ್ಯಮಿಗಳಿಗೆ ಆರ್ಥಿಕ ಬೆಂಬಲ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 

ಭಾರತದ ನಾಗರಿಕ ವಿಮಾನ ಯಾನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದರೂ, ಬೇಡಿಕೆಗೆ ತಕ್ಕಂತೆ ವಿಮಾನಗಳ ಸೇವೆ ಲಭ್ಯವಿಲ್ಲ. ದೇಶದಲ್ಲಿ 60 ಕೋಟಿಗೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಮೂಲಸೌಕರ್ಯ ಮತ್ತು ವಿಮಾನಗಳ ಕೊರತೆಯಿಂದಾಗಿ ಈ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ ಎಂದು ಸಿಎಫ್‌ಒ ರಾಬಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 

ಪ್ರಸ್ತುತ ಭಾರತದಲ್ಲಿ ಪ್ರತಿದಿನ ಸುಮಾರು 3,200 ರಿಂದ 3,300 ವಿಮಾನಗಳು ಸಂಚರಿಸುತ್ತಿವೆ. ದೇಶದ ಆರ್ಥಿಕ ಬೆಳವಣಿಗೆ ಆಧರಿಸಿ ಈ ಸಂಖ್ಯೆಯು ಸುಮಾರು 10 ಪಟ್ಟು ಹೆಚ್ಚಾಗಿ ದಿನಕ್ಕೆ 30,000 ವಿಮಾನಗಳಿಗೆ ತಲುಪುವ ಅಗತ್ಯವಿದೆ ಎಂದು ಅವರು ಅಂಕಿ ಅಂಶ ಸಹಿತ ವಿವರಿಸಿದ್ದಾರೆ. ತಾವು ನೇರವಾಗಿ ಏರ್‌ಲೈನ್ ಕಂಪನಿ ಆರಂಭಿಸುವ ಬದಲು, ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಯಾನ ಸಂಸ್ಥೆ ಅಥವಾ ಈ ಕ್ಷೇತ್ರಕ್ಕೆ ಕಾಲಿಡಲು ಬಯಸುವ ಹೊಸ ಉದ್ಯಮಿಗಳಿಗೆ ಬಂಡವಾಳ ಒದಗಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. 

ಅದಾನಿ ಗ್ರೂಪ್‌ನ ಈ ಹೊಸ ನಡೆ ಉದ್ಯಮ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ಕಂಪನಿಯು ವಿಮಾನಯಾನ ಉದ್ಯಮಕ್ಕೆ ಪ್ರವೇಶಿಸುವ ಸಾಧ್ಯತೆಯನ್ನು ನಿರಂತರವಾಗಿ ತಳ್ಳಿಹಾಕುತ್ತಲೇ ಬಂದಿತ್ತು. ಜುಲೈ 2026ರಲ್ಲಿ ವಿಮಾನಯಾನ ವ್ಯವಹಾರಕ್ಕೆ ಪ್ರವೇಶಿಸುವ ಯಾವುದೇ ಪ್ರಸ್ತಾವನೆಯನ್ನು ತಾವು ಪರಿಶೀಲಿಸುತ್ತಿಲ್ಲ ಎಂದು ಅದಾನಿ ಗ್ರೂಪ್ ಷೇರುಪೇಟೆಗೆ ಸ್ಪಷ್ಟನೆ ನೀಡಿತ್ತು. 

ಟಾಟಾ ಸಮೂಹದ ಏರ್ ಇಂಡಿಯಾ ಮತ್ತು ರಾಹುಲ್ ಭಾಟಿಯಾ ನೇತೃತ್ವದ ಇಂಡಿಗೋ ಸಂಸ್ಥೆಗಳು ಸದ್ಯಕ್ಕೆ ದೇಶದ ಶೇ. 90ರಷ್ಟು ವಿಮಾನ ಯಾನ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಕಳೆದ ವರ್ಷ ಇಂಡಿಗೋ ಸಂಸ್ಥೆಯಲ್ಲಿ ಉಂಟಾದ ತಾಂತ್ರಿಕ ಹಾಗೂ ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ಸಾವಿರಾರು ವಿಮಾನಗಳು ರದ್ದಾಗಿದ್ದವು. ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಘಟನೆಯ ಬಳಿಕ ದೇಶದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ಇನ್ನಷ್ಟು ಹೊಸ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂಬ ಕೂಗು ಕೇಳಿಬಂದಿತ್ತು.