ಸಂಕ್ರಾಂತಿ ವೇಳೆಗೆ ಕೆಐಒಸಿಎಲ್ ಸಮಸ್ಯೆಗೆ ಪರಿಹಾರ ; ದೇವದಾರಿ ಗಣಿಗಾರಿಕೆಯಿಂದ ಕಾರ್ಖಾನೆಗೆ ಪುನಶ್ಚೇತನ, ಸಚಿವ ಎಚ್.ಡಿ. ಕುಮಾರಸ್ವಾಮಿ

28-11-26 08:35 pm       HK News Staffer   ಕರಾವಳಿ

ಪಣಂಬೂರಿನಲ್ಲಿರುವ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್) ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಂದಿನ ಸಂಕ್ರಾಂತಿ ಹಬ್ಬದ ವೇಳೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಮಂಗಳೂರು, ನ.28: ಪಣಂಬೂರಿನಲ್ಲಿರುವ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್) ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಂದಿನ ಸಂಕ್ರಾಂತಿ ಹಬ್ಬದ ವೇಳೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಶನಿವಾರ ಸಂಜೆ ಕೆಐಒಸಿಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಚಿವರು, ಸಂಕ್ರಾಂತಿಯವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅಷ್ಟರೊಳಗೆ ಸಂಸ್ಥೆಯ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಉಕ್ಕು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಹಿ ಹಾಕಿದ ಮೊದಲ ಕಡತವೇ ಕೆಐಒಸಿಎಲ್‌ಗೆ ಸಂಬಂಧಿಸಿದ್ದಾಗಿತ್ತು. ಬಳ್ಳಾರಿಯ ದೇವದಾರಿ ಗಣಿಯಲ್ಲಿ ಗಣಿಗಾರಿಕೆ ನಡೆಸಲು ಕಂಪನಿಗೆ ಅಗತ್ಯವಿರುವ ಹಣಕಾಸು ಗ್ಯಾರಂಟಿ ಒದಗಿಸುವ ಕಡತಕ್ಕೆ ಸಹಿ ಹಾಕಿ ಹಣಕಾಸು ಇಲಾಖೆಗೆ ಕಳುಹಿಸಿದ್ದೆ. ಆದರೆ, ದೇವದಾರಿ ಗಣಿಗಾರಿಕೆ ವಿಚಾರದಲ್ಲಿ ಅರಣ್ಯ ನಾಶದ ಆರೋಪ ಹೊರಿಸಿ ರಾಜ್ಯ ಸರಕಾರದ ಕೆಲವರು ಅಪಪ್ರಚಾರ ನಡೆಸಿದ್ದಾರೆ. ಇದರಿಂದ ಸಂಸ್ಥೆಯ ಭವಿಷ್ಯ ಹಾಗೂ ಕಾರ್ಮಿಕರ ಬದುಕಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ದೇವದಾರಿಯಲ್ಲಿ ಗಣಿಗಾರಿಕೆ ಆರಂಭಿಸುವ ಮೂಲಕ ಕೆಐಒಸಿಎಲ್ ಸಂಸ್ಥೆಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಗತಿಪರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮುದ್ರ ತೀರದಲ್ಲಿರುವ ಇಂತಹ ಮಹತ್ವದ ಕೈಗಾರಿಕಾ ಸಂಸ್ಥೆಯನ್ನು ಉಳಿಸುವುದು ಕೇಂದ್ರ ಸರಕಾರದ ಜತೆಗೆ ರಾಜ್ಯ ಸರಕಾರದ ಜವಾಬ್ದಾರಿಯೂ ಆಗಿದೆ. ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡುವ ನಿರೀಕ್ಷೆಯಿದೆ ಎಂದರು.

ಒಂದು ಕಾಲದಲ್ಲಿ ಈ ಕಾರ್ಖಾನೆಯಲ್ಲಿ 2,500ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. 2022ರ ವರೆಗೂ ಸಂಸ್ಥೆ ಲಾಭದಾಯಕವಾಗಿ ಕಾರ್ಯ ನಿರ್ವಹಿಸಿತ್ತು. ಮತ್ತೆ ಹಿಂದಿನಂತೆ ಲಾಭದ ಹಾದಿಗೆ ಮರಳಲಿದೆ ಎಂಬ ವಿಶ್ವಾಸವಿದೆ. 2030ರ ವೇಳೆಗೆ ದೇಶದಲ್ಲಿ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದ್ದು, ಅದರ ಭಾಗವಾಗಿ ಕೆಐಒಸಿಎಲ್ ಕೂಡ ಪುನಶ್ಚೇತನಗೊಳ್ಳಲಿದೆ ಎಂದು ಹೇಳಿದರು.

ಪ್ರಸ್ತುತ ಕಾರ್ಖಾನೆ ತೀವ್ರ ಸಂಕಷ್ಟದಲ್ಲಿದ್ದು, ಒಂದು ಹಂತದಲ್ಲಿ ಮುಚ್ಚುವ ಭೀತಿಯನ್ನೂ ಎದುರಿಸಿತ್ತು. ಆದರೂ ಸಂಸ್ಥೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಲಾಗುತ್ತಿದೆ. ಕಾರ್ಮಿಕರ ಸಹಕಾರದಿಂದ ಮಾತ್ರ ಕಾರ್ಖಾನೆಯನ್ನು ಉಳಿಸಲು ಸಾಧ್ಯ. ಕಾರ್ಮಿಕರ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಕೆಐಒಸಿಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಕಿರಣ್ ಅವರೊಂದಿಗೆ ಸಭೆ ನಡೆಸಿದ ಸಚಿವರು, ಸಂಸ್ಥೆಯ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

ಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.