ಮಂತ್ರಿಗಳ ಸೋಷಿಯಲ್ ಮೀಡಿಯ ಪ್ರಚಾರಕ್ಕೆ 450 ಕೋಟಿ, ಆಶಾ ಕಾರ್ಯಕರ್ತರ ವೇತನಕ್ಕೆ ದುಡ್ಡಿಲ್ಲವೇ..? ಖಾದರ್ ಅವರೇ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುವುದಿಲ್ಲವೇ? ಧನಲಕ್ಷ್ಮಿ ಗಟ್ಟಿ ಪ್ರಶ್ನೆ

28-11-26 07:26 pm       HK News Staffer   ಕರಾವಳಿ

ಆಶಾ ಕಾರ್ಯಕರ್ತೆಯರು ಇದ್ದರೂ ಇಲ್ಲದಿದ್ದರೂ ಆರೋಗ್ಯ ಇಲಾಖೆಯ ಕೆಲಸಗಳು ನಡೆಯುತ್ತವೆಯೆಂಬ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಹೇಳಿಕೆ ಖಂಡನೀಯ. ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುವುದಿಲ್ಲವೇ?ರಾಜ್ಯದ ಮಂತ್ರಿಗಳ ಸಾಮಾಜಿಕ ಜಾಲತಾಣ ನಿರ್ವಹಿಸಲು ವರ್ಷಕ್ಕೆ 450 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತೀರಿ. ಮಂಗಳೂರಲ್ಲಿ ಎರಡು ದಿವಸದ ಸಚಿವ ಸಂಪುಟ ಜಾತ್ರೆ ಮಾಡಲು ನಿಮ್ಮಲ್ಲಿ ದುಡ್ಡಿದೆ. ಬಡ ಆಶಾ ಕಾರ್ಯಕರ್ತೆಯರಿಗೆ ಸಮರ್ಪಕ ವೇತನ ನೀಡಲು ಮಾತ್ರ ನಿಮ್ಮಲ್ಲಿ ದುಡ್ಡಿಲ್ಲವೇ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ರಾಜ್ಯ ಸರಕಾರವನ್ನು ಪ್ರಶ್ನಿಸಿದರು.

ಉಳ್ಳಾಲ, ನ.28: ಆಶಾ ಕಾರ್ಯಕರ್ತೆಯರು ಇದ್ದರೂ ಇಲ್ಲದಿದ್ದರೂ ಆರೋಗ್ಯ ಇಲಾಖೆಯ ಕೆಲಸಗಳು ನಡೆಯುತ್ತವೆಯೆಂಬ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಹೇಳಿಕೆ ಖಂಡನೀಯ. ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುವುದಿಲ್ಲವೇ?ರಾಜ್ಯದ ಮಂತ್ರಿಗಳ ಸಾಮಾಜಿಕ ಜಾಲತಾಣ ನಿರ್ವಹಿಸಲು ವರ್ಷಕ್ಕೆ 450 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತೀರಿ. ಮಂಗಳೂರಲ್ಲಿ ಎರಡು ದಿವಸದ ಸಚಿವ ಸಂಪುಟ ಜಾತ್ರೆ ಮಾಡಲು ನಿಮ್ಮಲ್ಲಿ ದುಡ್ಡಿದೆ. ಬಡ ಆಶಾ ಕಾರ್ಯಕರ್ತೆಯರಿಗೆ ಸಮರ್ಪಕ ವೇತನ ನೀಡಲು ಮಾತ್ರ ನಿಮ್ಮಲ್ಲಿ ದುಡ್ಡಿಲ್ಲವೇ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ರಾಜ್ಯ ಸರಕಾರವನ್ನು ಪ್ರಶ್ನಿಸಿದರು.

ತೊಕ್ಕೊಟ್ಟುವಿನ‌ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಖಾದರ್ ಅವರ ಹೇಳಿಕೆಯು ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಮಾಡಿದ ಅವಮಾನ ಮಾತ್ರವಲ್ಲದೆ, ಇಡೀ ಮಹಿಳಾ ಸಮುದಾಯಕ್ಕೆ ತೋರಿದ ಅಗೌರವವಾಗಿದೆ. ಆಶಾ ಕಾರ್ಯಕರ್ತೆಯರ ಹೋರಾಟವನ್ನು ಸರಕಾರ ಕಡೆಗಣಿಸಿ, ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತರ ಜೊತೆಗೂಡಿ ಉಗ್ರ ಹೋರಾಟ ನಡೆಸಲಿದೆಯೆಂದು ಎಚ್ಚರಿಸಿದರು. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ರಾಣಿ ಹಾಗೂ ಒನಕೆ ಓಬವ್ವನ ವೇಷಗಳನ್ನು ಧರಿಸಿ, ಕುಣಿಸಿ, ಮುಖ್ಯಮಂತ್ರಿಗಳಿಗೆ ಅಂಜಲ್ , ಕಾನೆ ತಿನ್ನಿಸಿ ಶಹಭಾಸ್ ಗಿರಿ ಪಡೆದಿರಿ. ಅಂದು ಆಶಾ ಕಾರ್ಯಕರ್ತೆಯರ ವೇಷಭೂಷಣ ಮತ್ತು ಪ್ರತಿಭೆಯನ್ನು ಸಂಭ್ರಮಿಸಿದವರು, ಇಂದು ಅದೇ ವರ್ಗದವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವಾಗ ಅವರ ನೋವು ಮತ್ತು ಸಂಕಷ್ಟಗಳನ್ನು ಹಗುರವಾಗಿ ಪರಿಗಣಿಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನ ಬ್ಲಾಕ್ ಮೇಲ್ ಎಂದು ಬಿಂಬಿಸುತ್ತಿದ್ದಾರೆ. ಬ್ಲಾಕ್ ಮೇಲ್ ನಡೆಸಲು ಆಶಾ ಕಾರ್ಯಕರ್ತೆಯರು ಸ್ಟಿಂಗ್ ಆಪರೇಷನ್ ನಡೆಸಿದ್ರೇ ಎಂದು ಪ್ರಶ್ನಿಸಿದರು. ಪ್ರತಿಭಟನಾಕಾರರು ಕನಿಷ್ಟ ವೇತನವನ್ನು ಕೇಳುವುದು ತಪ್ಪಾ? ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ, ಸೇವೆಯನ್ನು ಮೆಚ್ಚಿ ಪ್ರಧಾನಿ ಮೋದಿಯವರೇ ಕೇಂದ್ರ ಸರಕಾರದಿಂದ ಜೀವ ವಿಮೆ ಯೋಜನೆ ಸೌಲಭ್ಯ ಒದಗಿಸಿ ಕೊಟ್ಟಿದ್ದಾರೆ. ಆದಷ್ಟು ಶೀಘ್ರ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕೆಂದು ಧನಲಕ್ಷ್ಮಿ ಗಟ್ಟಿ ಆಗ್ರಹಿಸಿದರು.

ಬಿಜೆಪಿ ಮಂಗಳೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್ ಮಾತನಾಡಿ 
ಆಶಾ ಕಾರ್ಯಕರ್ತರ ಬಗ್ಗೆ ಕೀಳಾಗಿ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ತಕ್ಷಣ ಕ್ಷಮೆ ಯಾಚಿಸಬೇಕು. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಲ್ಲಿಸಿದ ಸೇವೆಯನ್ನು ಯಾರೂ ಮರೆಯಬಾರದು. ನಾವೆಲ್ಲರೂ ಮನೆಯೊಳಗೆ ಉಳಿದಿದ್ದ ಸಂದರ್ಭದಲ್ಲಿ ಅವರು ತಮ್ಮ ಪ್ರಾಣದ ಹಂಗನ್ನ ತೊರೆದು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸೇವೆ ನೀಡಿದ್ದಾರೆ. ಇಷ್ಟಲ್ಲದೆ ಕಾಂಗ್ರೆಸ್‌ ಪಕ್ಷದ ಯಾವುದೇ ಕಾರ್ಯಕ್ರಮ ನಡೆದರೂ ಹೆಚ್ಚಿನ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗವಹಿಸಬೇಕೆಂಬ ಒತ್ತಡವೂ ಅವರ ಮೇಲಿದೆ. ಆಶಾ ಕಾರ್ಯಕರ್ತೆಯರನ್ನ ಈ ರೀತಿ ಬಳಸಿಕೊಂಡರೂ ಅವರ ಸಮಸ್ಯೆಗಳನ್ನು ಮಾತ್ರ ಆಲಿಸದೆ, ಅವರ ಬಗ್ಗೆಯೇ ಕೀಳಾಗಿ ಮಾತನಾಡುವ ಸಚಿವರ ನಡೆ ಖಂಡನೀಯವೆಂದರು.

ಬಿಜೆಪಿ ಮಂಗಳೂರು ಮಂಡಲದ ಕೋಶಾಧಿಕಾರಿ ಸುಮಲತಾ ಕೊಣಾಜೆ, ಮಹಿಳಾ ಮೋರ್ಚಾ‌ ಪ್ರಧಾನ ಕಾರ್ಯದರ್ಶಿ ಸ್ವಪ್ನಾ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.